ಬ್ರಿಟನ್ ವಿರುದ್ಧ ಭಾರತ ಮಹಿಳಾ ಹಾಕಿ ತಂಡಕ್ಕೆ ಜಯ

Update: 2020-02-04 17:12 GMT

ಆಕ್ಲೆಂಡ್, ಫೆ.4: ನಾಯಕಿ ರಾಣಿ ರಾಂಪಾಲ್ ಗಳಿಸಿದ ಏಕೈಕ ಗೋಲು ನೆರವಿನಿಂದ ಭಾರತೀಯ ಮಹಿಳಾ ಹಾಕಿ ತಂಡ ಗ್ರೇಟ್ ಬ್ರಿಟನ್ ವಿರುದ್ಧ ಪಂದ್ಯವನ್ನು 1-0 ಅಂತರದಿಂದ ಗೆದ್ದುಕೊಂಡಿದೆ. ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ 47ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದ ರಾಣಿ ಅವರು ಭಾರತ ಈಗ ನಡೆಯುತ್ತಿರುವ ಹಾಕಿ ಪ್ರವಾಸದಲ್ಲಿನ ನಾಲ್ಕನೇ ಪಂದ್ಯ ಗೆಲ್ಲಲು ನೆರವಾದರು.

ನ್ಯೂಝಿಲ್ಯಾಂಡ್ ಡೆವಲಪ್‌ಮೆಂಟ್ ತಂಡದ ವಿರುದ್ಧ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದ ಬಳಿಕ ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿತ್ತು.

ಮಂಗಳವಾರ ನಡೆದ ಪಂದ್ಯದಲ್ಲಿ ಸರ್ವ ಶಕ್ತಿಯೊಂದಿಗೆ ಆಡಿದ ಭಾರತ ಉತ್ತಮ ಆರಂಭ ಪಡೆಯಿತು. ತಂಡ ಆರಂಭದಲ್ಲೇ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ, ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. ‘‘ನಾವು ಸಾಕಷ್ಟು ಅವಕಾಶವನ್ನು ಸೃಷ್ಟಿಸಿದ್ದೇವೆ ಹಾಗೂ ಇಂತಹ ಅವಕಾಶವನ್ನು ಸೃಷ್ಟಿಸುವತ್ತ ಕಾರ್ಯೋನ್ಮುಖವಾಗಬೇಕಾಗಿದೆ. ಪಂದ್ಯದಲ್ಲಿ ನಮ್ಮ ರಕ್ಷಣಾಕೋಟೆ ಬಲಿಷ್ಠವಾಗಿತ್ತು. ಇದೊಂದು ಉತ್ತಮ ಅಂಶವಾಗಿದೆ’’ ಎಂದು ಭಾರತದ ಮುಖ್ಯ ಕೋಚ್ ಜೊರ್ಡ್ ಮರ್ಜಿನ್ ಹೇಳಿದ್ದಾರೆ.

ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾದವು. ಭಾರತ ಮೂರನೇ ಕ್ವಾರ್ಟರ್‌ನಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ, ಈ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾಯಿತು.ಭಾರತ ತನ್ನ ಆಕ್ರಮಣಕಾರಿ ದಾಳಿಯನ್ನು ಮುಂದುವರಿಸಿತು. 47ನೇ ನಿಮಿಷದಲ್ಲಿ ನಾಯಕಿ ರಾಣಿ ರಾಂಪಾಲ್, ಬ್ರಿಟನ್ ಗೋಲ್‌ಕೀಪರ್‌ರನ್ನು ವಂಚಿಸಿ ತಂಡದ ಗೋಲು ಖಾತೆ ತೆರೆದರು. ಭಾರತ 1-0 ಮುನ್ನಡೆ ಪಡೆದ ಬಳಿಕ ಬ್ರಿಟನ್ ಆಟಗಾರ್ತಿಯರು ತೀವ್ರ ಒತ್ತಡಕ್ಕೆ ಸಿಲುಕಿದ್ದು,ಇದರಿಂದ ಚೇತರಿಸಿಕೊಳ್ಳಲು ಅವರು ವಿಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News