ರಣಜಿ ಟ್ರೋಫಿ: ಕರ್ನಾಟಕಕ್ಕೆ ‘ಸಮರ್ಥ’ ಶತಕದ ನೆರವು

Update: 2020-02-04 17:21 GMT

ಶಿವಮೊಗ್ಗ, ಫೆ.4: ಆರಂಭಿಕ ಬ್ಯಾಟ್ಸ್‌ಮನ್ ರವಿಕುಮಾರ್ ಸಮರ್ಥ್ ಔಟಾಗದೆ ದಾಖಲಿಸಿದ ಶತಕ ಮತ್ತು ಕೃಷ್ಣಮೂರ್ತಿ ಸಿದ್ದಾರ್ಥ್ ಅರ್ಧಶತಕದ ನೆರವಿನಲ್ಲಿ ಕರ್ನಾಟಕ ತಂಡ ಇಲ್ಲಿ ಮಂಗಳವಾರ ಆರಂಭಗೊಂಡ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಮಧ್ಯಪ್ರದೇಶ ತಂಡದ ವಿರುದ್ಧ ಸಾಧಾರಣ ಮೊತ್ತ ದಾಖಲಿಸಿದೆ.

  ಶಿವಮೊಗ್ಗದ ನವುಲೆ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕ ತಂಡ ಆರಂಭಿಕ ಆಘಾತ ಅನುಭವಿಸಿದರೂ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಆರ್.ಸಮರ್ಥ್ ಹಾಗೂ ಕೆ. ಸಿದ್ದಾರ್ಥ್ ನಾಲ್ಕನೇ ವಿಕೆಟ್‌ಗೆ ದಾಖಲಿಸಿದ 150 ರನ್‌ಗಳ ಜೊತೆಯಾಟದ ನೆರವಿನಲ್ಲಿ ಸುಭದ್ರ ಸ್ಥಿತಿಯಲ್ಲಿದೆ. ದಿನದ ಆಟ ನಿಂತಾಗ ರವಿಕುಮಾರ್ ಸಮರ್ಥ್ 105 ರನ್ (278ಎಸೆತ, 6ಬೌಂಡರಿ) ಮತ್ತು ಕೃಷ್ಣಮೂರ್ತಿ ಸಿದ್ದಾರ್ಥ 62 ರನ್(130ಎಸೆತ, 7ಬೌಂಡರಿ) ಗಳಿಸಿ ಕ್ರೀಸ್‌ನಲ್ಲಿದ್ದರು. ಮಧ್ಯಪ್ರದೇಶದ ವೇಗಿಗಳಾದ ಗೌರವ್ ಯಾದವ್, ರವಿ ಯಾದವ್ ಮತ್ತು ಕುಲದೀಪ್ ಸೇನ್ ದಾಳಿಗೆ ಸಿಲುಕಿದ ಕರ್ನಾಟಕ ತಂಡ ಅಗ್ರ ಸರದಿಯ ಮೂವರು ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಕಳೆದುಕೊಂಡಿತು. ಸಮರ್ಥ್ ಜೊತೆ ಇನಿಂಗ್ಸ್ ಆರಂಭಿಸಿದ ಭರವಸೆಯ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ (0) ಖಾತೆ ತೆರೆಯವ ಮೊದಲೇ ರವಿ ಯಾದವ್ ಎಸೆತದಲ್ಲಿ ಹಿಮಾಂಶು ಮಂತ್ರಿಗೆ ಕ್ಯಾಚ್ ನೀಡಿ ನಿರಾಸೆಗೊಳಿಸಿದರು. ರೋಹನ್ ಕದಮ್ ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ತಳವೂರಿದರು. ಅವರು 36 ಎಸೆತಗಳನ್ನು ಎದುರಿಸಿದರೂ 2 ಬೌಂಡರಿಗಳ ನೆರವಿನಲ್ಲಿ 9 ರನ್ ಗಳಿಸಿದರು. 15ನೇ ಓವರ್‌ನ ಕೊನೆಯ ಎಸೆತದಲ್ಲಿ ಕದಮ್ ಅವರು ಗೌರವ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ಕರುಣ್ ನಾಯರ್ ಮತ್ತು ಸಮರ್ಥ್ ಜೊತೆಯಾಗಿ ಮೂರನೇ ವಿಕೆಟ್‌ಗೆ 48 ರನ್‌ಗಳ ಕೊಡುಗೆ ನೀಡಿದರು. ತಂಡದ ಸ್ಕೋರ್ 83ಕ್ಕೆ ತಲುಪುವಾಗ ನಾಯರ್ ಔಟಾದರು. 22 ರನ್ (72ಎ, 2ಬೌ) ಗಳಿಸಿದ ನಾಯರ್ ಅವರು ಕುಲದೀಪ್ ಸೇನ್ ಎಸೆತದಲ್ಲಿ ಹಿಮಾಂಶು ಮಂತ್ರಿಗೆ ಕ್ಯಾಚ್ ನೀಡಿದರು.

 41.1 ಓವರ್‌ನಲ್ಲಿ 83ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ತಂಡವನ್ನು ಸಮರ್ಥ್ ಮತ್ತು ಸಿದ್ದಾರ್ಥ್ ಆಧರಿಸಿದರು.

ಸಮರ್ಥ್ ರೈಲ್ವೇಸ್ ವಿರುದ್ಧ ದಿಲ್ಲಿಯಲ್ಲಿ ನಡೆದ ಪಂದ್ಯದಲ್ಲಿ (0) ಖಾತೆ ತೆರೆಯದೆ ನಿರ್ಗಮಿಸಿದ್ದರು. ಆದರೆ ಈ ಪಂದ್ಯದಲ್ಲಿ ತನ್ನ 10ನೇ ಪ್ರಥಮ ದರ್ಜೆ ಶತಕ ದಾಖಲಿಸುವಲ್ಲಿ ಯಶಸ್ವಿಯಾದರು. ಅವರಿಗೆ ಸಾಥ್ ನೀಡಿರುವ ಸಿದ್ದಾರ್ಥ್ 6ನೇ ಅರ್ಧಶತಕ ಪೂರೈಸಿ ಬ್ಯಾಟಿಂಗ್‌ನ್ನು ಎರಡನೇ ದಿನಕ್ಕೆ ಕಾಯ್ದಿರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News