ನಾಳೆ ಭಾರತ - ನ್ಯೂಝಿಲ್ಯಾಂಡ್ ಮೊದಲ ಏಕದಿನ ಪಂದ್ಯ

Update: 2020-02-04 17:43 GMT

ಹ್ಯಾಮಿಲ್ಟನ್, ಫೆ.4: ಭಾರತ ಮತ್ತು ನ್ಯೂಝಿಲ್ಯಾಂಡ್ ತಂಡಗಳ ನಡುವೆ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯ ಬುಧವಾರ ಇಲ್ಲಿ ನಡೆಯಲಿದೆ.

ಐದು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಕ್ಲೀನ್ ಸ್ವೀಪ್ ಸಾಧಿಸಿದ ಭಾರತ ಇದೀಗ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅದೇ ಪ್ರದರ್ಶನವನ್ನು ಮುಂದುವರಿಸಲು ಎದುರು ನೋಡುತ್ತಿದೆ.

 ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ಬಳಿಕ ಭಾರತ ಮೂರನೇ ಏಕದಿನ ಸರಣಿಯನ್ನು ಆಡುತ್ತಿದೆ. ಈ ಮೊದಲು ವೆಸ್ಟ್‌ಇಂಡೀಸ್ ಮತ್ತು ಆಸ್ಟ್ರೇಲಿಯ ವಿರುದ್ಧ ಸರಣಿ ಜಯಿಸಿತ್ತು.

ಲಾರ್ಡ್ಸ್‌ನಲ್ಲಿ ವಿಶ್ವಕಪ್ ಫೈನಲ್‌ನಲ್ಲಿ ಬೌಂಡರಿ ಲೆಕ್ಕದ ಆಧಾರದಲ್ಲಿ ಸೋತು ಇಂಗ್ಲೆಂಡ್‌ಗೆ ಶರಣಾದ ಬಳಿಕ ಮೊದಲ ಬಾರಿ ನ್ಯೂಝಿಲ್ಯಾಂಡ್ ಏಕದಿನ ಸರಣಿಯನ್ನು ಆಡುತ್ತಿದೆ.

ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತವನ್ನು 18 ರನ್‌ಗಳ ಅಂತರದಲ್ಲಿ ನ್ಯೂಝಿಲ್ಯಾಂಡ್ ಮಣಿಸುವ ಮೂಲಕ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಸೋಲದಿದ್ದರೂ ಪ್ರಶಸ್ತಿ ಎತ್ತುವ ಅವಕಾಶ ಕಳೆದುಕೊಂಡಿತ್ತು.

ಭಾರತ ಆ ಬಳಿಕ ನ್ಯೂಝಿಲ್ಯಾಂಡ್‌ನಲ್ಲಿ ನಡೆದ ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 5-0 ಗೆಲುವಿನೊಂದಿಗೆ ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡಿತ್ತು.

ಭಾರತ ಮತ್ತು ನ್ಯೂಝಿಲ್ಯಾಂಡ್ ತಂಡಗಳು ಮುಂಬರುವ ಟ್ವೆಂಟಿ-20 ವಿಶ್ವಕಪ್‌ಗೆ ತಯಾರಿ ನಡೆಸುತ್ತಿವೆ. ಆದ ಕಾರಣ ಏಕದಿನ ಸರಣಿಯು ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆದಿಲ್ಲ. ಆದರೆ ಆ ಬಳಿಕ ನಡೆಯುವ ಟೆಸ್ಟ್ ಸರಣಿ ಹೆಚ್ಚಿನ ಮಹತ್ವ ಪಡೆದಿದೆ. ಏಕೆಂದರೆ ಅದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯಾಗಿದೆ. ಈಗಾಗಲೇ ನಂ.1 ಸ್ಥಾನದಲ್ಲಿರುವ ಟೀಮ್ ಇಂಡಿಯಾಕ್ಕೆ ಅಗ್ರಸ್ಥಾನವನ್ನು ಮುಂದುವರಿಸಲು ಟೆಸ್ಟ್ ಸರಣಿಯಲ್ಲಿ ಗೆಲ್ಲಬೇಕಾಗಿದೆ.

ಭಾರತ ಏಕದಿನ ತಂಡದಲ್ಲಿ ಹಲವು ಮಂದಿ ಹಿರಿಯ ಆಟಗಾರರು ಗಾಯದ ಕಾರಣದಿಂದಾಗಿ ಆಡುತ್ತಿಲ್ಲ.ಕಾಲು ನೋವಿನಿಂದಾಗಿ ಉಪನಾಯಕ ರೋಹಿತ್ ಶರ್ಮಾ ತಂಡದಿಂದ ದೂರ ಉಳಿದಿದ್ದಾರೆ. ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ನಾಯಕತ್ವ ವಹಿಸಿದ್ದ ರೋಹಿತ್ ಶರ್ಮಾ ಬ್ಯಾಟಿಂಗ್ ವೇಳೆ ಗಾಯಗೊಂಡಿದ್ದರು. ಈ ಕಾರಣದಿಂದಾಗಿ ಅವರು ಬ್ಯಾಟಿಂಗ್‌ನ್ನು ಅರ್ಧದಲ್ಲಿ ನಿಲ್ಲಿಸಿ ಪಂದ್ಯದಿಂದ ನಿವೃತ್ತರಾಗಿದ್ದರು. ಫೀಲ್ಡಿಂಗ್ ನಡೆಸಲಿಲ್ಲ. ವಿಕೆಟ್ ಕೀಪರ್ ಲೋಕೇಶ್ ರಾಹುಲ್ ತಂಡವನ್ನು ನಾಯಕರಾಗಿ ಮುನ್ನಡೆಸಿ ತಂಡಕ್ಕೆ 7 ರನ್‌ಗಳ ರೋಚಕ ಗೆಲುವು ತಂದುಕೊಟ್ಟಿದ್ದರು. ಭಾರತ ತಂಡದಲ್ಲಿ ರೋಹಿತ್ ಶರ್ಮಾ ಜೊತೆಗೆ ಶಿಖರ್ ಧವನ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್ ಮತ್ತು ದೀಪಕ್ ಚಹಾರ್ ಗಾಯಗೊಂಡು ತಂಡದಿಂದ ದೂರವಾಗಿದ್ದಾರೆ. ಮಾಯಾಂಕ್ ಅಗರ್ವಾಲ್ ಅವರು ರೋಹಿತ್ ಬದಲಿಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವಿಕೆಟ್ ಕೀಪರ್ ಆಗಿರುವ ಲೊಕೇಶ್ ರಾಹುಲ್ ನಂ.5 ಆಟಗಾರನಾಗಿ ಕೊಹ್ಲಿ ನಂ.3 ಮತ್ತು ಶ್ರೇಯಸ್ ಅಯ್ಯರ್ ನಂ.4 ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ. ಮನೀಷ್ ಪಾಂಡೆ , ಕೊಹ್ಲಿ ಮತ್ತು ಅಯ್ಯರ್ ಬಹಳ ಹೊತ್ತು ಇಂದು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಕೇದಾರ್ ಜಾಧವ್ ಮತ್ತು ರವೀಂದ್ರ ಜಡೇಜ ಆಲ್‌ರೌಂಡರ್ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮೂವರು ವೇಗಿಗಳು ಕಣಕ್ಕಿಳಿಯುವ ಸಾಧ್ಯತೆ ಇದೆ. ಪೃಥ್ವಿ ಶಾ ಮತ್ತು ಅಗರ್ವಾಲ್ ತಂಡದ ಇನಿಂಗ್ಸ್ ಆರಂಭಿಸುವ ಬಗ್ಗೆ ನಾಯಕ ಕೊಹ್ಲಿ ಸುಳಿವು ನೀಡಿದ್ದಾರೆ. ಇಬ್ಬರು ಮೊದಲ ಬಾರಿ ಇನಿಂಗ್ಸ್ ಆರಂಭಿಸಲಿದ್ದಾರೆ. ಈ ಹಿಂದೆ 2016ರಲ್ಲಿ ಲೋಕೇಶ್ ರಾಹುಲ್ ಮತ್ತು ಕರುಣ್ ನಾಯರ್ ಚೊಚ್ಚಲ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ್ದರು. 1974ರಲ್ಲಿ ಸುನೀಲ್ ಗವಾಸ್ಕರ್ ಮತ್ತು ಸುಧೀರ್ ನಾಯಕ್ ಚೊಚ್ಚಲ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿ ದಾಖಲೆ ಬರೆದಿದ್ದರು. ನ್ಯೂಝಿಲ್ಯಾಂಡ್ ತಂಡದಲ್ಲೂ ವಾತಾವರಣ ಸರಿಯಾಗಿಲ್ಲ. ನಾಯಕ ಕೇನ್ ವಿಲಿಯಮ್ಸನ್ ಗಾಯಾಳುಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಭಾರತ : ವಿರಾಟ್ ಕೊಹ್ಲಿ(ನಾಯಕ), ಪೃಥ್ವಿ ಶಾ, ಮಾಯಾಂಕ್ ಅಗರ್ವಾಲ್, ಲೋಕೇಶ್ ರಾಹುಲ್, ಮನೀಷ್ ಪಾಂಡೆ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಶಿವಮ್ ದುಬೆ, ರವೀಂದ್ರ ಜಡೇಜ, ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್, ಮುಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ.

ನ್ಯೂಝಿಲ್ಯಾಂಡ್: ಟಾಮ್ ಲಥಾಮ್(ನಾಯಕ), ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್, ಕಾಲಿನ ಡಿಗ್ರಾಂಡ್‌ಹೋಮ್, ಜಿಮ್ಮಿ ನಿಶಾಮ್, ಸ್ಕಾಟ್ ಕುಗ್ಲೆಜಿನ್, ಟಾಮ್ ಬ್ಲಂಡೆಲ್, ಹೆನ್ರಿ ನಿಕೊಲಾಸ್, ಮಿಚೆಲ್ ಸ್ಯಾಂಟ್ನೆರ್, ಹ್ಯಾಮಿಸ್ ಬೆನೆಟ್,ಇಶ್ ಸೋಧಿ, ಟಿಮ್ ಸೌಥಿ, ಕೇಲ್ ಜಮೀಸ್ಸನ್ , ಮಾರ್ಕ್ ಚ್ಯಾಪ್‌ಮನ್ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News