ಗೌರವ್, ಜ್ಯೋತಿಗೆ ಬೆಳ್ಳಿ ಪದಕ

Update: 2020-02-09 03:31 GMT

ಬುಡಾಪೆಸ್ಟ್, ಫೆ.8: ಹಂಗೇರಿಯಲ್ಲಿ ನಡೆದ 64ನೇ ಆವೃತ್ತಿಯ ಬಾಕ್ಸ್‌ಕೇ ಸ್ಮಾರಕ ಟೂರ್ನಮೆಂಟ್‌ನಲ್ಲಿ ನಾಲ್ಕು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಜಯಿಸುವುದರೊಂದಿಗೆ ಭಾರತ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಪ್ರೆಸಿಡೆಂಟ್ಸ್ ಕಪ್‌ನಲ್ಲಿ ಬೆಳ್ಳಿ ವಿಜೇತ ಗೌರವ್ ಚೌಹಾಣ್(91ಕೆಜಿ)ಹಾಗೂ ಮಾಜಿ ಯೂತ್ ವಿಶ್ವ ಚಾಂಪಿಯನ್ ಜ್ಯೋತಿ ಗುಲಿಯಾ(51ಕೆಜಿ) ಟೂರ್ನಿಯಲ್ಲಿ ಬೆಳ್ಳಿಯ ನಗೆ ಬೀರಿದರು. ದಕ್ಷಿಣ ಏಶ್ಯ ಗೇಮ್ಸ್ ಚಾಂಪಿಯನ್ ಗೌರವ್ ಸೆಮಿ ಫೈನಲ್‌ನಲ್ಲಿ ವಾಕ್‌ಓವರ್ ಪಡೆದರು. ಫೈನಲ್‌ನಲ್ಲಿ ಕಝಖ್‌ಸ್ತಾನದ ಐಬೆಕ್ ಒರಾಲ್ಬೆ ವಿರುದ್ಧ 0-4 ಅಂತರದಿಂದ ಸೋತಿದ್ದಾರೆ. ಮಾಜಿ ಯೂತ್ ವರ್ಲ್ಡ್ ಚಾಂಪಿಯನ್ ಜ್ಯೋತಿ ಗುಲಿಯಾ (51ಕೆಜಿ)ಫೈನಲ್‌ನಲ್ಲಿ ರಶ್ಯದ ಸೊಲುಯಾನೊವಾ ಸ್ವೆಟ್ಲಾನಾ ವಿರುದ್ಧ 2-3 ಅಂತರದಿಂದ ಸೋಲನುಭವಿಸಿ ಬೆಳ್ಳಿಗೆ ತೃಪ್ತಿಪಟ್ಟರು. ಜ್ಯೋತಿ ಸೆಮಿ ಫೈನಲ್‌ನಲ್ಲಿ ಕೆನಡಾದ ಮಂಡಿ ಬುಜೊಲ್ಡ್ ರನ್ನು ಒಮ್ಮತ ತೀರ್ಪಿನಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿದರು. ಸ್ಪರ್ಧೆಯಲ್ಲಿದ್ದ ಭಾರತದ ಇತರ ಇಬ್ಬರು ಬಾಕ್ಸರ್‌ಗಳಾದ ಮನೀಶಾ(57 ಕೆಜಿ)ಹಾಗೂ ಪಿ.ಎಲ್. ಪ್ರಸಾದ್(52ಕೆಜಿ)ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತೆ ಮನೀಶಾ ರಶ್ಯದ ಲುಡ್ಮಿಲಾ ವೊರೊನ್‌ಸೋವಾ ವಿರುದ್ಧ ಸೋಲನುಭವಿಸಿ ಬೆಳ್ಳಿ ಜಯಿಸಿದರು. ಪ್ರಸಾದ್ ಫೈನಲ್‌ನಲ್ಲಿ ಕಝಖ್‌ಸ್ತಾನದ ಮಹಮೂದ್ ಖಾನ್ ವಿರುದ್ಧ ಒಮ್ಮತದ ತೀರ್ಪಿನಲ್ಲಿ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News