ಸಿಡ್ನಿ ಸಿಕ್ಸರ್‌ಗೆ ಬಿಗ್ ಬ್ಯಾಶ್ ಲೀಗ್ ಕ್ರಿಕೆಟ್ ಟ್ರೋಫಿ

Update: 2020-02-09 03:58 GMT

ಸಿಡ್ನಿ(ಆಸ್ಟ್ರೇಲಿಯ), ಫೆ.8: ಬಿಗ್ ಬ್ಯಾಶ್ ಲೀಗ್(ಬಿಬಿಎಲ್)ಟ್ವೆಂಟಿ-20 ಕ್ರಿಕೆಟ್ ಟೂರ್ನಮೆಂಟ್ ಫೈನಲ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು 19 ರನ್‌ಗಳ ಅಂತರದಿಂದ ಸದೆಬಡಿದ ಸಿಡ್ನಿ ಸಿಕ್ಸರ್ ತಂಡ 9ನೇ ಆವೃತ್ತಿಯ ಟೂರ್ನಿಯಲ್ಲಿ ಟ್ರೋಫಿ ಎತ್ತಿಹಿಡಿಯಿತು.

  ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮಳೆ ಬಾಧಿತ ಫೈನಲ್‌ನಲ್ಲಿ ಪ್ರತಿ ತಂಡಕ್ಕೆ 12 ಓವರ್‌ಗಳನ್ನು ನಿಗದಿಪಡಿಸಲಾಯಿತು. 117 ರನ್ ಬೆನ್ನಟ್ಟಿದ ಮೆಲ್ಬೋರ್ನ್ ಸ್ಟಾರ್ಸ್ ಕ್ಷಿಪ್ರವಾಗಿ ಆರಂಭಿಕ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ಮಾರ್ಕಸ್ ಸ್ಟೋನಿಸ್(10), ನಿಕ್ ಮ್ಯಾಡಿಸನ್(0), ಗ್ಲೆನ್ ಮ್ಯಾಕ್ಸ್‌ವೆಲ್(5) ಹಾಗೂ ಪೀಟರ್ ಹ್ಯಾಂಡ್ಸ್‌ಕಾಂಬ್(6)ಔಟಾದಾಗ ಮೆಲ್ಬೋರ್ನ್ 4.1 ಓವರ್‌ಗಳಲ್ಲಿ 25 ರನ್‌ಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಬೆನ್ ಡಂಕ್ ಹಾಗೂ ನಿಕ್ ಲಾರ್ಕಿನ್ 5ನೇ ವಿಕೆಟ್‌ಗೆ 15 ರನ್ ಸೇರಿಸಿ ತಂಡವನ್ನು ಆಧರಿಸಲು ಯತ್ನಿಸಿದರು. ಬೆನ್ ಡಂಕ್ 11 ರನ್ ಗಳಿಸಿ ಔಟಾದರು. ಅಂತಿಮವಾಗಿ 19 ರನ್ ಕೊರತೆ ಎದುರಿಸಿದ ಮೆಲ್ಬೋರ್ನ್ ತಂಡ 12 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 96 ರನ್ ಗಳಿಸಿತು. ಕೌಲ್ಟರ್ ನೀಲ್ ಔಟಾಗದೆ 19 ಹಾಗೂ ಲಾರ್ಕಿನ್ ಔಟಾಗದೆ 38 ರನ್ ಗಳಿಸಿದರು. ಸಿಕ್ಸರ್ ತಂಡದ ಪರ ಲಿಯೊನ್ ಹಾಗೂ ಒ’ಕೀಫೆ ತಲಾ 2 ವಿಕೆಟ್‌ಗಳನ್ನು ಪಡೆದರು. ಇದಕ್ಕೂ ಮೊದಲು ಟಾಸ್ ಜಯಿಸಿದ ಮೆಲ್ಬೋರ್ನ್ ತಂಡ ಸಿಕ್ಸರ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಜೋಶ್ ಫಿಲಿಪ್ಸ್ ಅರ್ಧಶತಕ ಗಳಿಸಿ 12 ಓವರ್‌ಗಳಲ್ಲಿ ತಂಡದ ಮೊತ್ತವನ್ನು 5 ವಿಕೆಟ್‌ಗಳ ನಷ್ಟಕ್ಕೆ 116ಕ್ಕೆ ತಲುಪಿಸಿದರು. ಫಿಲಿಪ್ಸ್ 29 ಎಸೆತಗಳಲ್ಲಿ ಮೂರು ಸಿಕ್ಸರ್‌ಗಳ ಸಹಿತ 52 ರನ್ ಗಳಿಸಿದರು. ಸ್ಟೀವ್ ಸ್ಮಿತ್ ಹಾಗೂ ಜೋರ್ಡನ್ ಸಿಲ್ಕ್ ಕ್ರಮವಾಗಿ 21 ಹಾಗೂ 27 ರನ್ ಗಳಿಸಿದರು. ಜೇಮ್ಸ್ ವಿನ್ಸಿ(2), ನಾಯಕ ಮೊಸೆಸ್ ಹೆನ್ರಿಕ್ಸ್(7) ಹಾಗೂ ಡೇನಿಯಲ್ ಹ್ಯೂಸ್(0)ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಝಾಂಪ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News