×
Ad

ಧೋನಿ, ಕಪಿಲ್‌ದೇವ್ ದಾಖಲೆ ಮುರಿದ ರವೀಂದ್ರ ಜಡೇಜ

Update: 2020-02-09 09:39 IST

ಆಕ್ಲೆಂಡ್,ಫೆ.8: ಭಾರತದ ಕೆಳ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ತಾನೆಷ್ಟು ಪ್ರಮುಖ ಆಟಗಾರ ಎನ್ನುವುದನ್ನು ಆಲ್‌ರೌಂಡರ್ ರವೀಂದ್ರ ಜಡೇಜ ಶನಿವಾರ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.

ನ್ಯೂಝಿಲ್ಯಾಂಡ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಭಾರತ ಗೆಲ್ಲಲು 274 ರನ್ ಚೇಸಿಂಗ್ ಮಾಡಿದಾಗ ಜಡೇಜ 73 ಎಸೆತಗಳಲ್ಲಿ 55 ರನ್ ಗಳಿಸಿದರು. ತಂಡವನ್ನು ಗೆಲುವಿನ ಸನಿಹ ಕೊಂಡೊಯ್ದಿದ್ದರು. ಉತ್ತಮ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ನ ಮೂಲಕ ಜಡೇಜ ಭಾರತದ ಸೀಮಿತ ಓವರ್ ಕ್ರಿಕೆಟ್‌ನ ಅವಿಭಾಜ್ಯ ಅಂಗವಾಗಿ ಹೊರಹೊಮ್ಮಿದ್ದಾರೆ.ಜಡೇಜರನ್ನು ರವಿಚಂದ್ರನ್ ಅಶ್ವಿನ್ ಜೊತೆಗೆ ಸೀಮಿತ ಓವರ್ ಕ್ರಿಕೆಟ್‌ನಿಂದ ಮೂಲೆ ಗುಂಪು ಮಾಡಲಾಗುತ್ತಿದೆ.

  ಎರಡನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಜಡೇಜ ಏಳನೇ ಕ್ರಮಾಂಕದಲ್ಲಿ ಅತ್ಯಂತ ಹೆಚ್ಚು ಬಾರಿ 50ಕ್ಕೂ ಅಧಿಕ ರನ್ ಗಳಿಸಿ ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ಹಾಗೂ ಕಪಿಲ್‌ದೇವ್ ಅವರ ದಾಖಲೆಯನ್ನು ಮುರಿದರು.

ಜಡೇಜ 7ನೇ ಕ್ರಮಾಂಕದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಏಳನೇ ಬಾರಿ ಅರ್ಧಶತಕ ಸಿಡಿಸಿದರು. ಧೋನಿ ಹಾಗೂ ಕಪಿಲ್‌ದೇವ್ ವೃತ್ತಿಜೀವನದಲ್ಲಿ ತಲಾ ಆರು ಬಾರಿ ಈ ಸಾಧನೆ ಮಾಡಿದ್ದಾರೆ. ಧೋನಿ ಇನ್ನಷ್ಟೇ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಬೇಕಾಗಿದೆ. ಹೀಗಾಗಿ ಅವರು ಇನ್ನಷ್ಟು ಹೆಚ್ಚು ಸ್ಕೋರ್ ಗಳಿಸುವ ಸಾಧ್ಯತೆಯಿದೆ. ಆದರೆ, ಧೋನಿ 2019ರ ಜುಲೈನಲ್ಲಿ ಐಸಿಸಿ ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಕಿವೀಸ್ ವಿರುದ್ಧ ಭಾರತ ಸೋತು ನಿರ್ಗಮಿಸಿದ ಬಳಿಕ ಯಾವುದೇ ಪಂದ್ಯಗಳಲ್ಲಿ ಆಡಿಲ್ಲ. ಇದು ಒಟ್ಟಾರೆ ಜಡೇಜ ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ 12ನೇ ಅರ್ಧಶತಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News