Breaking News: ಚೊಚ್ಚಲ ಅಂಡರ್-19 ಕ್ರಿಕೆಟ್ ವಿಶ್ವಕಪ್ ಗೆದ್ದ ಬಾಂಗ್ಲಾದೇಶ

Update: 2020-02-09 16:35 GMT

ಪೊಚೆಫ್‌ಸ್ಟ್ರೂಮ್(ದ.ಆಫ್ರಿಕಾ), ಫೆ.9: ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಭಾರತವನ್ನು ಮಣಿಸಿದ ಬಾಂಗ್ಲಾದೇಶ ತಂಡ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಳೆಬಾಧಿತ ಪಂದ್ಯದಲ್ಲಿ ಗೆಲುವಿಗೆ 46 ಓವರ್‌ಗಳಲ್ಲಿ 170 ರನ್ ಗಳಿಸಬೇಕಾಗಿದ್ದ ಬಾಂಗ್ಲಾದೇಶ ತಂಡ 42.1 ಓವರ್‌ಗಳಲ್ಲಿ 7 ವಿಕೆಟ್‌ನಷ್ಟಕ್ಕೆ ಗೆಲುವಿನ ನಗೆ ಬೀರಿತು.

 ಗೆಲ್ಲಲು 178 ರನ್ ಗುರಿ ಬೆನ್ನಟ್ಟಿರುವ ಬಾಂಗ್ಲಾದೇಶ 41ನೇ ಓವರ್ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿದಾಗ ಮಳೆ ಕಾಣಿಸಿಕೊಂಡಿತು. ಮತ್ತೆ ಪಂದ್ಯ ಆರಂಭಗೊಂಡಾಗ ಬಾಂಗ್ಲಾಕ್ಕೆ ಡಿಎಲ್ ನಿಯಮದಂತೆ ಗೆಲುವಿಗೆ 170 ರನ್‌ಗಳ ಸವಾಲನ್ನು ನೀಡಲಾಯಿತು. ನಾಯಕ ಅಕ್ಬರ್ ಅಲಿ (ಔಟಾಗದೆ 43 ರನ್, 77 ಎಸೆತ, 4 ಬೌಂಡರಿ,1 ಸಿಕ್ಸರ್)ಮತ್ತು ಪರ್ವೇಝ್ ಹುಸೇನ್ ಇಮಾನ್(47, 79 ಎಸೆತ, 7 ಬೌಂಡರಿ) ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತದ ರವಿ ಬಿಶ್ನೋಯ್(4-30)ದಾಳಿಗೆ ಸಿಲುಕಿದ ಬಾಂಗ್ಲಾದೇಶ ಒಂದು ಹಂತದಲ್ಲಿ 102 ರನ್‌ಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಏಳನೇ ವಿಕೆಟ್ ಜೊತೆಯಾಟದಲ್ಲಿ 41 ರನ್ ಸೇರಿಸಿದ ಆರಂಭಿಕ ಆಟಗಾರ ಪರ್ವೇಝ್(47, 79 ಎಸೆತ)ಹಾಗೂ ನಾಯಕ ಅಲಿ ತಂಡವನ್ನು ಆಧರಿಸಿದರು. ಭಾರತದ ಸುಶಾಂತ್ ಮಿಶ್ರಾ 25 ರನ್‌ಗೆ 2 ವಿಕೆಟ್ ಪಡೆದರು

ಇದಕ್ಕೂ ಮೊದಲು ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತೊಂದು ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ಭಾರತ ತಂಡ ಬಾಂಗ್ಲಾದೇಶದ ಗೆಲುವಿಗೆ 178 ರನ್ ಗುರಿ ನೀಡಿತು.

ಪೊಚೆಫ್‌ಸ್ಟ್ರೂಮ್‌ನ ನಿಧಾನಗತಿಯ ಪಿಚ್‌ನಲ್ಲಿ ರವಿವಾರ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 47.2 ಓವರ್‌ಗಳಲ್ಲಿ 177 ರನ್‌ಗೆ ಆಲೌಟಾಯಿತು. ಭಾರತ 13 ಇನಿಂಗ್ಸ್ ಗಳಲ್ಲಿ ಮೊದಲ ಬಾರಿ ಆಲೌಟಾಯಿತು. 9 ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರ ದಿವ್ಯಾಂಶ್ ಸಕ್ಸೇನ(2)ವಿಕೆಟ್ ಕಳೆದುಕೊಂಡ ಭಾರತ ಕಳಪೆ ಆರಂಭ ಪಡೆದಿತ್ತು. ಅರ್ಧಶತಕ ಸಿಡಿಸಿದ ಜೈಸ್ವಾಲ್(88, 121 ಎಸೆತ, 8 ಬೌಂಡರಿ, 1 ಸಿಕ್ಸರ್)ತಿಲಕ್ ವರ್ಮಾ ಜೊತೆಗೆ 2ನೇ ವಿಕೆಟ್‌ಗೆ 94 ರನ್ ಜೊತೆಯಾಟ ನಡೆಸಿದರು. ಯಶಸ್ವಿ ಔಟಾದ ಬೆನ್ನಿಗೇ ಭಾರತ ತರಗಲೆಯಂತೆ ಉದುರಿತು. 4 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದ್ದ ಭಾರತ ಕೊನೆಯ 7 ವಿಕೆಟ್‌ಗಳನ್ನು 21 ರನ್ ಸೇರಿಸುವಷ್ಟರಲ್ಲಿ ಕಳೆದುಕೊಂಡು 177 ರನ್‌ಗೆ ಗಂಟುಮೂಟೆ ಕಟ್ಟಿತು.

ಬಾಂಗ್ಲಾದ ಪರವಾಗಿ ಅವಿಶೇಕ್ ದಾಸ್(3-40)ಯಶಸ್ವಿ ಬೌಲರ್ ಎನಿಸಿಕೊಂಡರು. ಇಸ್ಲಾಂ(2-31) ಹಾಗೂ ತಂಝಿಮ್ ಹಸನ್ ಸಾಕಿಬ್ (2-28)ತಲಾ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಭಾರತ ಅಂಡರ್-19: 47.2 ಓವರ್‌ಗಳಲ್ಲಿ 177/10

(ಯಶಸ್ವಿ ಜೈಸ್ವಾಲ್ 88, ತಿಲಕ್ ವರ್ಮಾ 38, ಜುರೆಲ್ 22, ಅವಿಶೇಕ್ ದಾಸ್ 3-40, ತಂಝಿಮ್ 2-28, ಇಸ್ಲಾಂ 2-31)

ಬಾಂಗ್ಲಾದೇಶ: 42.1 ಓವರ್‌ಗಳಲ್ಲಿ 170/7

(ಅಕ್ಬರ್ ಅಲಿ ಔಟಾಗದೆ 43, ಪರ್ವೇಝ್ 47, ರವಿ ಬಿಶ್ನೋಯ್ 4-30)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News