ಅಂಡರ್-19 ವಿಶ್ವಕಪ್ ಫೈನಲ್ ಬಳಿಕ ಗಲಾಟೆ ಐವರು ಆಟಗಾರರ ವಿರುದ್ಧ ಐಸಿಸಿ ಕ್ರಮ

Update: 2020-02-11 17:31 GMT

ದುಬೈ, ಫೆ.11: ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ನಡೆದ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಭಾರತ ವಿರುದ್ಧ ಐತಿಹಾಸಿಕ ಜಯ ದಾಖಲಿಸಿದ ಬೆನ್ನಿಗೇ ಉಂಟಾದ ಗಲಾಟೆಗೆ ಸಂಬಂಧಿಸಿ ಐವರು ಆಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಸೋಮವಾರ ತಿಳಿಸಿದೆ. ಬಾಂಗ್ಲಾದೇಶ ತಂಡ ಭಾರತ ವಿರುದ್ಧ ಫೈನಲ್‌ನಲ್ಲಿ 3 ವಿಕೆಟ್‌ಗಳ ಜಯ ಸಾಧಿಸಿ ಮೊದಲ ಬಾರಿ ವಿಶ್ವಕಪ್ ಪ್ರಶಸ್ತಿ ಜಯಿಸಿತ್ತು. ರಕಿಬುಲ್ ಹಸನ್ ಗೆಲುವಿನ ರನ್ ದಾಖಲಿಸಿದ ತಕ್ಷಣ ಗಲಾಟೆ ಶುರುವಾಯಿತು. ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿರುವ ಬಾಂಗ್ಲಾದೇಶದ ತೌಹಿದ್, ಶಮೀಮ್ ಹುಸೇನ್ ಹಾಗೂ ರಕಿಬುಲ್ ಹಸನ್ ಹಾಗೂ ಭಾರತದ ಆಕಾಶ್ ಸಿಂಗ್ ಮತ್ತು ರವಿ ಬಿಶ್ನೋಯ್ ಅವರನ್ನು ನಾಲ್ಕರಿಂದ 10 ಅಂತರ್‌ರಾಷ್ಟ್ರೀಯ ಪಂದ್ಯಗಳಿಂದ ಅಮಾನತುಗೊಳಿಸಲಾಗಿದೆ.

‘‘ಪಂದ್ಯದ ಬಳಿಕ ಕೆಲವು ಆಟಗಾರರು ನಿರಾಸೆಯನ್ನು ವ್ಯಕ್ತಪಡಿಸಿದ ರೀತಿಗೆ ನಮ್ಮ ಕ್ರೀಡೆಯಲ್ಲಿ ಸ್ಥಾನವಿಲ್ಲ. ಕ್ರಿಕೆಟ್ ಸ್ಫೂರ್ತಿಗೆ ಗೌರವ ಎನ್ನುವುದು ಹೃದಯ ಇದ್ದಂತೆ. ಆಟಗಾರರು ಸ್ವ-ಶಿಸ್ತು ಪ್ರದರ್ಶಿಸುವುದನ್ನು ನಿರೀಕ್ಷಿಸಲಾಗುತ್ತದೆ. ಯಶಸ್ಸು ಸಾಧಿಸಿದ ಎದುರಾಳಿ ಆಟಗಾರರನ್ನು ಅಭಿನಂದಿಸಬೇಕು ಹಾಗೂ ಯಶಸ್ಸನ್ನು ತಮ್ಮ ತಂಡದೊಂದಿಗೆ ಆನಂದಿಸಬೇಕು’’ಎಂದು ಐಸಿಸಿ ಅಧಿಕಾರಿ ಜೆಫ್ ಅಲರ್ಡೈಸ್ ಹೇಳಿದ್ದಾರೆ. ಮಳೆಬಾಧಿತ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ಬ್ಯಾಟ್ಸ್ ಮನ್ ಅವಿಶೇಕ್ ದಾಸ್‌ರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಭಾರತದ ಸ್ಪಿನ್ನರ್ ಬಿಶ್ನೋಯ್‌ಗೆ ಎರಡು ಡಿಮೆರಿಟ್ ಪಾಯಿಂಟ್ಸ್ ನೀಡಲಾಗಿದೆ. ಬಿಶ್ನೋಯ್ ಟೂರ್ನಮೆಂಟ್‌ನಲ್ಲಿ ಗರಿಷ್ಠ ವಿಕೆಟ್(17) ಪಡೆದ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News