ಏಶ್ಯ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಭಾರತ ಶುಭಾರಂಭ

Update: 2020-02-11 17:37 GMT

ಮನಿಲಾ, ಫೆ.11: ಕಝಖ್‌ಸ್ತಾನದ ವಿರುದ್ಧ ಮೊದಲ ಗ್ರೂಪ್ ಪಂದ್ಯದಲ್ಲಿ ಭಾರತ 4-1 ಅಂತರದಿಂದ ಜಯ ಸಾಧಿಸಿದ್ದು, ಕಿಡಂಬಿ ಶ್ರೀಕಾಂತ್ ತಂಡದ ಗೆಲುವಿನ ನೇತೃತ್ವ ವಹಿಸಿದರು. ಈ ಗೆಲುವಿನ ಮೂಲಕ ಭಾರತ ಏಶ್ಯ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪುವ ಅವಕಾಶ ಉಜ್ವಲವಾಗಿದೆ.

ವಿಶ್ವದ ಮಾಜಿ ನಂ.1 ಶ್ರೀಕಾಂತ್, ಉದಯೋನ್ಮುಖ ಆಟಗಾರರಾದ ಲಕ್ಷ ಸೇನ್ ಹಾಗೂ ಶುಭಾಂಕರ ಡೇ ಸಿಂಗಲ್ಸ್ ಪಂದ್ಯಗಳಲ್ಲಿ ಜಯ ಸಾಧಿಸಿದರು. ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಶ್ರೀಕಾಂತ್ ಕೇವಲ 23 ನಿಮಿಷಗಳಲ್ಲಿ ಡಿಮಿಟ್ರಿ ಪನರಿನ್ ವಿರುದ್ಧ 21-10, 21-7 ಅಂತರದಿಂದ ಮಣಿಸಿದರೆ, 2ನೇ ಸಿಂಗಲ್ಸ್ ಪಂದ್ಯದಲ್ಲಿ ಸೇನ್ ಅವರು ಅರ್ಟರ್ ನಿಯಾರೊವ್ ವಿರುದ್ಧ 21 ನಿಮಿಷಗಳಲ್ಲಿ 21-13, 21-8 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು.

 ಮೂರನೇ ಸಿಂಗಲ್ಸ್ ಪಂದ್ಯದಲ್ಲಿ ಶುಭಾಂಕರ್ ಡೇ ಅವರು ಖೈಟ್ಮುರಾಟ್ ಕುಲ್ಮಟೊವ್‌ರನ್ನು 26 ನಿಮಿಷಗಳ ಹೋರಾಟದಲ್ಲಿ 21-11, 21-5 ಗೇಮ್‌ಗಳ ಅಂತರದಿಂದ ಮಣಿಸಿ ದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಬಿ.ಸಾಯಿ ಪ್ರಣೀತ್ ಮಂಗಳವಾರ ಸಿಂಗಲ್ಸ್ ಪಂದ್ಯದಲ್ಲಿ ಆಡಲಿಲ್ಲ. ಆದರೆ, ಡಬಲ್ಸ್ ನಲ್ಲಿ ಚಿರಾಗ್ ಶೆಟ್ಟಿಯೊಂದಿಗೆ ಆಡಿದರು. ಡಬಲ್ಸ್ ಪಂದ್ಯದಲ್ಲಿ ಪ್ರಣೀತ್-ಚಿರಾಗ್ ಜೋಡಿ ಕಝಕ್‌ನ ನಿಯಾರೊವ್ ಹಾಗೂ ಪನರಿನ್‌ಗೆ 21-18, 16-21, 19-21 ಗೇಮ್‌ಗಳ ಅಂತರದಿಂದ ಸೋತಿದೆ.

ಎಂಆರ್ ಅರ್ಜುನ್ ಹಾಗೂ ಧುೃವ್ ಕಪಿಲ್ ಕಝಖ್ ಜೋಡಿ ನಿಕಿತ ಬ್ರಾಗಿನ್ ಹಾಗೂ ಖೈಟ್‌ಮುರಾಟ್ ಕುಲ್ಮಾಟೊವ್‌ರನ್ನು ಎರಡನೇ ಡಬಲ್ಸ್ ಪಂದ್ಯದಲ್ಲಿ 21-14, 21-8 ಗೇಮ್‌ಗಳ ಅಂತರದಿಂದ ಮಣಿಸಿತು. ಚಾಂಪಿಯನ್‌ಶಿಪ್‌ನಲ್ಲಿ ಭಾರತ ಬಿ ಗುಂಪಿನಲ್ಲಿ ಮಲೇಶ್ಯಾ ಹಾಗೂ ಕಝಖ್‌ಸ್ತಾನದೊಂದಿಗೆ ಸ್ಥಾನ ಪಡೆದಿದೆ. ನಾಲ್ಕು ಗುಂಪುಗಳ ಅಗ್ರ ಎರಡು ತಂಡಗಳು ಕ್ವಾರ್ಟರ್ ಫೈನಲ್ ತಲುಪಲಿವೆ. ಭಾರತ ಗುರುವಾರ ಮಲೇಶ್ಯವನ್ನು ಎದುರಿಸಲಿದೆ.

ಕೊರೊನಾ ವೈರಸ್ ಭೀತಿಯ ನಡುವೆಯೂ ಭಾರತದ ಪುರುಷರ ತಂಡ ಪೂರ್ಣಪ್ರಮಾಣದ ಶಕ್ತಿಯೊಂದಿಗೆ ಕಣಕ್ಕಿಳಿದಿದ್ದು, ಒಲಿಂಪಿಕ್ಸ್ ವರ್ಷದಲ್ಲಿ ನಿರ್ಣಾಯಕ ರ್ಯಾಂಕಿಂಗ್ ಪಾಯಿಂಟ್ಸ್ ಗೆ ಅಗತ್ಯವಿರುವ ಪದಕಗಳತ್ತ ಕಣ್ಣು ನೆಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News