ಕ್ವಾರ್ಟರ್ ಫೈನಲ್ ಮೇಲೆ ಕಣ್ಣಿಟ್ಟಿರುವ ಕರ್ನಾಟಕಕ್ಕೆ ಇಂದು ಬರೋಡ ಎದುರಾಳಿ

Update: 2020-02-11 17:48 GMT

 ಬೆಂಗಳೂರು, ಫೆ.11: ರಣಜಿ ಟ್ರೋಫಿಯ ‘ಬಿ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಬುಧವಾರ ಆತಿಥೇಯ ಕರ್ನಾಟಕ ತಂಡ ಬರೋಡದ ಸವಾಲನ್ನು ಎದುರಿಸಲಿದೆ. ರಣಜಿ ಯಲ್ಲಿ ಕ್ವಾರ್ಟರ್ ಫೈನಲ್ ಸ್ಥಾನವನ್ನು ಖಚಿತಪಡಿಸ ಬೇಕಾದರೆ ಕರ್ನಾಟಕ ತಂಡ ಬರೋಡ ವಿರುದ್ಧ ಕನಿಷ್ಠ ಮೂರು ಅಂಕವನ್ನು ಗಳಿಸಬೇಕಾಗಿದೆ. ಒಂದು ವೇಳೆ ಮೂರಂಕ ಗಳಿಸಲು ವಿಫಲವಾದರೆ ನಾಕೌಟ್ ಹಂತಕ್ಕೇರಲು ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ.

ಕರುಣ್ ನಾಯರ್ ನೇತೃತ್ವದ ಕರ್ನಾಟಕ ತವರು ಮೈದಾನವಾಗಿರುವ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಋತುವಿನಲ್ಲಿ ಮೊದಲ ಪಂದ್ಯ ಆಡುತ್ತಿದೆ. ಕಳೆದ ವಾರ ಶಿವಮೊಗ್ಗದಲ್ಲಿ ನಡೆದ ರಣಜಿ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಡ್ರಾ ಸಾಧಿಸಿದ್ದರೂ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆಯಲು ವಿಫಲವಾದ ಕಾರಣ ಒಂದಂಕಿಗೆ ತೃಪ್ತಿಪಟ್ಟುಕೊಂಡಿತ್ತು. ಮುಂಬೈ ಪಂದ್ಯದ ಬಳಿಕ ಆರ್.ಸಮರ್ಥ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಈ ಋತುವಿನಲ್ಲಿ ಮೊದಲ ಶತಕ ಗಳಿಸಿದ್ದರು. ಕೆ.ವಿ.ಸಮರ್ಥ್ ಮೂರನೇ ಪಂದ್ಯವಾಡಿದ್ದರೂ ಹೋರಾಟಕಾರಿ ಅರ್ಧಶತಕ ಸಿಡಿಸಿದ್ದರು.

ಆಲ್‌ರೌಂಡರ್ ಶ್ರೇಯಸ್ ಗೋಪಾಲ್ 7 ಪಂದ್ಯಗಳಲ್ಲಿ ಕೇವಲ ಆರು ವಿಕೆಟ್‌ಗಳನ್ನು ಪಡೆದು ನಿರಾಸೆಗೊಳಿಸಿದ್ದಾರೆ. ಗೋಪಾಲ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದರೂ, ಇನ್ನೊಮ್ಮೆ ವೈಫಲ್ಯವಾದರೆ ಅವರ ಸ್ಥಾನಕ್ಕೆ ಬೇರೆ ಆಟಗಾರರು ಬರಬಹುದು. ನಾಯಕ ಕರುಣ್ ನಾಯರ್ ಬ್ಯಾಟಿಂಗ್ ಕೂಡ ನಿರಾಶಾದಾಯಕವಾಗಿದೆ. ಈ ಋತುವಿನಲ್ಲಿ ಅವರು ಕೇವಲ 2 ಬಾರಿ ಅರ್ಧಶತಕ ಗಳಿಸಿದ್ದರು. ಮೈಸೂರಿನಲ್ಲಿ ಹಿಮಾಚಲಪ್ರದೇಶ ವಿರುದ್ಧ ಆ ಎರಡೂ ಅರ್ಧಶತಕ ಗಳಿಸಿದ್ದರು.

ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಮರಳಿಕೆಯಿಂದ ಭಾರತದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಕಾಲಿನ ಮೂಳೆಮುರಿತದಿಂದಾಗಿ ಮೂರು ತಿಂಗಳ ಕಾಲ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇವರ ಆಗಮನದಿಂದಾಗಿ ಕರ್ನಾಟಕದ ವೇಗದ ಬೌಲಿಂಗ್‌ಗೆ ಹೊಸ ಆಯಾಮ ಲಭಿಸಿದೆ.

ಇದೇ ವೇಳೆ ಬರೋಡ ತಂಡ ರಣಜಿಯ ಕ್ವಾರ್ಟರ್ ಫೈನಲ್ ರೇಸ್‌ನಿಂದ ಹೊರಗುಳಿದಿದೆ. ಬರೋಡ ತವರು ನೆಲದಲ್ಲಿ ತಮಿಳುನಾಡು ಹಾಗೂ ಸೌರಾಷ್ಟ್ರದ ವಿರುದ್ಧ ಸತತ ಸೋಲಿನಿಂದ ಕಂಗೆಟ್ಟಿದೆ. ಭಾರತ ‘ಎ’ ತಂಡದೊಂದಿಗೆ ನ್ಯೂಝಿಲ್ಯಾಂಡ್ ಪ್ರವಾಸದಲ್ಲಿದ್ದ ನಾಯಕ ಕೃನಾಲ್ ಪಾಂಡ್ಯ ಕಳೆದ ವಾರ ತಂಡಕ್ಕೆ ವಾಪಸಾಗಿದ್ದರು. ಆದರೂ ಬರೋಡದ ಪ್ರದರ್ಶನದಲ್ಲಿ ಸುಧಾರಣೆಯಾಗಿರಲಿಲ್ಲ. ಮೂರು ದಿನಗಳೊಳಗೆ ತಮಿಳುನಾಡು ವಿರುದ್ಧ ಬರೋಡ ಇನಿಂಗ್ಸ್ ಅಂತರದಿಂದ ಸೋಲುಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News