ಇಂದು ಟ್ವೆಂಟಿ-20 ತ್ರಿಕೋನ ಸರಣಿ ಫೈನಲ್
ಮೆಲ್ಬೋರ್ನ್, ಫೆ.11: ತನ್ನ ಬ್ಯಾಟಿಂಗ್ ವೈಫಲ್ಯವನ್ನು ಸರಿಪಡಿಸಿಕೊಂಡರೆ ಬುಧವಾರ ಇಲ್ಲಿ ನಡೆಯಲಿರುವ ಟ್ವೆಂಟಿ-20 ತ್ರಿಕೋನ ಸರಣಿಯ ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಎದುರಿಸಲಿರುವ ಭಾರತ ಮಹಿಳಾ ತಂಡಕ್ಕೆ ಪ್ರಶಸ್ತಿ ಎತ್ತಿಹಿಡಿಯುವ ಅಪೂರ್ವ ಅವಕಾಶವಿದೆ.
ಮೊದಲ ಮೂರು ಲೀಗ್ ಪಂದ್ಯದಲ್ಲಿ ಒಗ್ಗಟ್ಟಿನ ಪ್ರದರ್ಶನ ನೀಡಲು ವಿಫಲವಾಗಿದ್ದ ಭಾರತ ಶನಿವಾರ ಆಸ್ಟ್ರೇಲಿಯ ವಿರುದ್ಧ ಉತ್ತಮ ಬ್ಯಾಟಿಂಗ್ ಮಾಡಿ 7 ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಹೀಗಾಗಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡ ಫೈನಲ್ ಪ್ರವೇಶಿಸಿದೆ.
ಉಭಯ ತಂಡಗಳು ಲೀಗ್‌ನಲ್ಲಿ ತಲಾ ಒಂದು ಪಂದ್ಯ ಗೆದ್ದುಕೊಂಡಿವೆ. ಹಿರಿಯ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ಅವರು ಹರ್ಮನ್‌ಪ್ರೀತ್ ಜೊತೆ ಬ್ಯಾಟಿಂಗ್ ಮುನ್ನಡೆಸುತ್ತಿದ್ದಾರೆ. 16ರ ಹರೆಯದ ಆಟಗಾರ್ತಿ ಶೆಫಾಲಿ ಶರ್ಮಾ ಆಸ್ಟ್ರೇಲಿಯ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ ಮಿಂಚಿದ್ದರು.
ಆತಿಥೇಯ ತಂಡ ಕೊನೆಯ ಲೀಗ್ ಪಂದ್ಯದಲ್ಲಿ ಅಶ್ಲೆಘ್ ಗಾರ್ಡ್ನೆರ್(93,57 ಎಸೆತ)ಹಾಗೂ ಮೆಗ್ ಲ್ಯಾನಿಂಗ್(37,22 ಎಸೆತ)ನೆರವಿನಿಂದ 5 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತ್ತು. ಭಾರತ 19.4 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತ್ತು. ಓಪನರ್ ಶೆಫಾಲಿ 28 ಎಸೆತಗಳಲ್ಲಿ 49 ರನ್ ಹಾಗೂ ಮಂಧಾನ 48 ಎಸೆತಗಳಲ್ಲಿ 55 ರನ್ ಕಲೆ ಹಾಕಿ ತಂಡದ ಗೆಲುವಿಗೆ ನೆರವಾದರು.
ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದ ಶೆಫಾಲಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು. ಶೆಫಾಲಿಯ ಇನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ಇತ್ತು. ಹಿರಿಯ ಆಟಗಾರ್ತಿ ಮಂಧಾನ ಏಳು ಬೌಂಡರಿ ಬಾರಿಸುವುದರೊಂದಿಗೆ ಇನಿಂಗ್ಸ್‌ಗೆ ಆಸರೆಯಾಗಿದ್ದರು. ಜೆಮಿಮಾ ರೋಡ್ರಿಗಸ್ 19 ಎಸೆತಗಳಲ್ಲಿ 30 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಬೌಂಡರಿಗಳಿವೆ. ಹರ್ಮನ್‌ಪ್ರೀತ್ ಎಸೆತಕ್ಕೊಂದು ರನ್ (20)ಗಳಿಸಿ ಭಾರತ ಗುರಿಯನ್ನು ತಲುಪಲು ನೆರವಾಗಿದ್ದರು.
ಟೂರ್ನಮೆಂಟ್‌ನಲ್ಲಿ ಭಾರತದ ಮಹಿಳಾ ಬೌಲರ್‌ಗಳ ಪ್ರದರ್ಶನ ಚೆನ್ನಾಗಿತ್ತು. ದೀಪ್ತಿ ಶರ್ಮಾ ಹಾಗೂ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಸ್ಥಿರ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಭಾರತ ವಿರುದ್ಧ ಸೋತ ಮರುದಿನ ಇಂಗ್ಲೆಂಡ್‌ನ ವಿರುದ್ಧ ಜಯ ಸಾಧಿಸಿರುವ ಆಸ್ಟ್ರೇಲಿಯ ತನ್ನ ಆತ್ಮವಿಶ್ವಾಸವನ್ನು ಹೆಚ್ಚಿ ಸಿಕೊಂಡಿದೆ. ಓಪನರ್ ಬೆಥ್ ಮೂನಿ ಹಾಗೂ ಗಾರ್ಡ್ನೆರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಲ್ಯಾನಿಂಗ್ ಹಾಗೂ ಎಲ್ಲಿಸ್ ಪೆರ್ರಿ ಉತ್ತಮ ಟಚ್‌ನಲ್ಲಿದ್ದಾರೆ. ಆರಂಭಿಕ ಆಟಗಾರ್ತಿ ಎಲ್ಲಿಸ್ಸಾ ಹೀಲಿ ಕಳಪೆ ಫಾರ್ಮ್‌ನಲ್ಲಿದ್ದಾರೆ.