ಯುಎಇ ಕ್ರಿಕೆಟ್ ನಿರ್ದೇಶಕರಾಗಿ ಭಾರತದ ಮಾಜಿ ಆಲ್‌ರೌಂಡರ್ ರಾಬಿನ್ ಸಿಂಗ್

Update: 2020-02-12 17:12 GMT

ದುಬೈ, ಫೆ.12: ಭಾರತದ ಮಾಜಿ ಆಲ್‌ರೌಂಡರ್ ರಾಬಿನ್ ಸಿಂಗ್ ಯುನೈಟೆಡ್ ಅರಬ್ ಎಮಿರೇಟ್ಸ್‌ನ(ಯುಎಇ)ಕ್ರಿಕೆಟ್ ನಿರ್ದೇಶಕರಾಗಿ ಬುಧವಾರ ನೇಮಕಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಮುಖ್ಯ ಕೋಚ್ ಡೌಗಿ ಬ್ರೌನ್ ಉಚ್ಚಾಟನೆಯ ಬಳಿಕ 56ರ ಹರೆಯದ ಸಿಂಗ್‌ರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ಅಪ್ಪಳಿಸಿದ ಫಿಕ್ಸಿಂಗ್ ಹಗರಣದಿಂದ ಯುಎಇ ರಾಷ್ಟ್ರೀಯ ಕ್ರಿಕೆಟ್ ತಂಡ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ ರಾಬಿನ್ ಸಿಂಗ್ ಅಧಿಕಾರವಹಿಸಿಕೊಳ್ಳುತ್ತಿದ್ದಾರೆ. ಫಿಕ್ಸಿಂಗ್ ಹಗರಣದಲ್ಲಿ ನಾಯಕ ಮುಹಮ್ಮದ್ ನವೀದ್ ಸಹಿತ ಕೆಲವು ಸೀನಿಯರ್ ಆಟಗಾರರನ್ನು ಅಮಾನತುಗೊಳಿಸಲಾಗಿತ್ತು. ಆಯ್ಕೆ ಸಮಿತಿಯನ್ನು ವಿಸರ್ಜಿಸಲಾಗಿತ್ತು.

ಆಯ್ಕೆ ಸಮಿತಿ ಇಲ್ಲದೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬ್ರೌನ್ ಅವರು ಸ್ಕಾಟ್ಲೆಂಡ್ ಹಾಗೂ ಅಮೆರಿಕ ವಿರುದ್ಧ ಸ್ವದೇಶದಲ್ಲಿ ನಡೆದಿದ್ದ ಸರಣಿ, ಒಮಾನ್ ಹಾಗೂ ನಮೀಬಿಯಾ ವಿರುದ್ಧ ಮಸ್ಕತ್‌ನಲ್ಲಿ ಜನವರಿಯಲ್ಲಿ ನಡೆದ ಎರಡು ವಿಶ್ವಕಪ್ ಲೀಗ್ ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡಿದ್ದರು. ಸಿಂಗ್ 1989 ಹಾಗೂ 2001ರ ನಡುವೆ ಒಂದು ಟೆಸ್ಟ್ ಹಾಗೂ 136 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಕೋಚಿಂಗ್‌ನಲ್ಲಿ ಖ್ಯಾತಿ ಪಡೆದಿದ್ದರು.

ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿ ಮುಂಬೈ ಇಂಡಿಯನ್ಸ್‌ನೊಂದಿಗೆ ಕಾರ್ಯನಿರ್ವಹಿಸಿದ್ದರು. 2013ರಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬಾರ್ಬಡೊಸ್, ಟಿ-10 ಲೀಗ್‌ನಲ್ಲಿ ಟಿ-10 ಫ್ರಾಂಚೈಸಿಗಳಲ್ಲಿ ಕೆಲಸ ಮಾಡಿದ್ದರು.

ಟ್ರಿನಿಡಾಡ್‌ನ ಪ್ರಿನ್ಸ್ ಟೌನ್‌ನಲ್ಲಿ ಜನಿಸಿರುವ ರಾಬಿನ್ ಸಿಂಗ್ ಯುಎಇನಲ್ಲಿ ಕೋಚಿಂಗ್ ಕ್ಲಿನಿಕ್‌ವೊಂದನ್ನು ನಡೆಸುತ್ತಿದ್ದಾರೆ. ಉತ್ತಮ ಫೀಲ್ಡರ್ ಹಾಗೂ ಉಪಯುಕ್ತ ಬ್ಯಾಟಿಂಗ್ ಆಲ್‌ರೌಂಡರ್ ಆಗಿದ್ದ ಸಿಂಗ್ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25.95ರ ಸರಾಸರಿಯಲ್ಲಿ 2,236 ರನ್ ಗಳಿಸಿದ್ದು, 100 ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ. ಸಿಂಗ್ 50 ಓವರ್‌ಗಳ ಪಂದ್ಯದಲ್ಲಿ 69 ವಿಕೆಟ್‌ಗಳನ್ನು ಪಡೆದಿದ್ದು, 22ಕ್ಕೆ 5 ವಿಕೆಟ್ ಶ್ರೇಷ್ಠ ನಿರ್ವಹಣೆಯಾಗಿದೆ. ಸಿಂಗ್ ಅವರ ಪೂರ್ವಾಧಿಕಾರಿ ಬ್ರೌನ್ ಮೂರು ವರ್ಷಗಳ ಕಾಲ ಯುಎಇ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News