ಭಾರತ ವಿರುದ್ಧ ಆಸ್ಟ್ರೇಲಿಯ ಮಹಿಳಾ ತಂಡಕ್ಕೆ ರೋಚಕ ಗೆಲುವು

Update: 2020-02-12 17:16 GMT

ಮೆಲ್ಬೋರ್ನ್, ಫೆ.12: ಸ್ಪಿನ್ನರ್ ಜೆಸ್ ಜೋನಾಸ್ಸೆನ್ ಐದು ವಿಕೆಟ್ ಗೊಂಚಲು ನೆರವಿನಿಂದ ಆಸ್ಟ್ರೇಲಿಯ ತಂಡ ಭಾರತವನ್ನು ಫೈನಲ್ ಪಂದ್ಯದಲ್ಲಿ 11 ರನ್‌ಗಳ ಅಂತರದಿಂದ ರೋಚಕವಾಗಿ ಮಣಿಸಿತು. ಈ ಮೂಲಕ ಮಹಿಳೆಯರ ತ್ರಿಕೋನ ಟ್ವೆಂಟಿ-20 ಸರಣಿ ಟ್ರೋಫಿಯನ್ನು ಗೆದ್ದುಕೊಂಡಿತು.

ಭಾರತದ ಸೋಲಿನೊಂದಿಗೆ 37 ಎಸೆತಗಳಲ್ಲಿ 66 ರನ್ ಗಳಿಸಿದ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ಅವರ ಪ್ರಯತ್ನ ವ್ಯರ್ಥವಾಯಿತು.

 ಗೆಲ್ಲಲು 156 ರನ್ ಗುರಿ ಪಡೆದಿರುವ ಭಾರತ 15ನೇ ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ ಅಂತಿಮವಾಗಿ 144 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಎಡಗೈ ಸ್ಪಿನ್ನರ್ ಜೋನಾಸ್ಸೆನ್ 4 ಓವರ್‌ಗಳಲ್ಲಿ ಕೇವಲ 12 ರನ್ ನೀಡಿ ಐದು ವಿಕೆಟ್ ಉರುಳಿಸಿದರು. ಮಹಿಳಾ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದ ಆಸ್ಟ್ರೇಲಿಯದ ಮೂರನೇ ಬೌಲರ್ ಎನಿಸಿಕೊಂಡರು.

ಗೆಲ್ಲಲು ಸವಾಲಿನ ಮೊತ್ತ ಬೆನ್ನಟ್ಟಿದ ಭಾರತದ ಪರ ಮಂಧಾನ ಏಕಾಂಗಿ ಹೋರಾಟ ನೀಡಿದ್ದು 37 ಎಸೆತಗಳ ಇನಿಂಗ್ಸ್‌ನಲ್ಲಿ 12 ಬೌಂಡರಿಗಳ ಸಹಿತ 66 ರನ್ ಗಳಿಸಿದರು.

ಮಂಧಾನ 15ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ ಬೆನ್ನಿಗೇ ಪಂದ್ಯ ಆಸ್ಟ್ರೇಲಿಯದತ್ತ ವಾಲಿತು. ನಾಯಕಿ ಹರ್ಮನ್‌ಪ್ರೀತ್ ಕೌರ್(14) 16ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಭಾರತದ ಗೆಲುವಿನ ಆಸೆಯೂ ಕಮರಿಹೋಯಿತು. ಇದಕ್ಕೂ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 155 ರನ್ ಗಳಿಸಿತು. ಆರಂಭಿಕ ಆಟಗಾರ್ತಿ ಮೂನಿ 54 ಎಸೆತಗಳಲ್ಲಿ 9 ಬೌಂಡರಿಗಳ ಸಹಿತ ಔಟಾಗದೆ 71 ರನ್ ಗಳಿಸಿದರು. ಸರಣಿಯಲ್ಲಿ ಒಟ್ಟು 208 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಈ ಸಾಧನೆಗೆ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

19ನೇ ಓವರ್ ಅಂತ್ಯಕ್ಕೆ ಆಸ್ಟ್ರೇಲಿಯ 5 ವಿಕೆಟ್‌ಗಳ ನಷ್ಟಕ್ಕೆ 136 ರನ್ ಗಳಿಸಿ ರನ್‌ಗಾಗಿ ಪರದಾಟ ನಡೆಸುತ್ತಿತ್ತು. ಆಗ ಮೂನಿ ಹಾಗೂ ರಾಚೆಲ್ ಹೇನ್ಸ್(18 ರನ್,7 ಎಸೆತ)ಕೊನೆಯ 6 ಎಸೆತಗಳಲ್ಲಿ ರನ್ ಹೊಳೆ ಹರಿಸಿದರು. ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಕೊನೆಯ ಓವರ್‌ನಲ್ಲಿ 19 ರನ್ ಬಿಟ್ಟುಕೊಟ್ಟು ಕೈಸುಟ್ಟುಕೊಂಡರು. ಮೂನಿ ಎರಡನೇ ವಿಕೆಟ್‌ಗೆ ಅಶ್ಲೆ ಗಾರ್ಡ್ನರ್(26) ಅವರೊಂದಿಗೆ 52 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆನಂತರ ಲ್ಯಾನಿಂಗ್(26)ಅವರೊಂದಿಗೆ 3ನೇ ವಿಕೆಟ್‌ಗೆ 51 ರನ್ ಸೇರಿಸಿ ತಂಡವನ್ನು ಆಧರಿಸಿದರು. ಭಾರತದ ಬೌಲಿಂಗ್ ದಾಳಿ ಆರಂಭಿಸಿದ್ದ ದೀಪ್ತಿ ಶರ್ಮಾ 4 ಓವರ್‌ಗಳ ಸ್ಪೆಲ್‌ನಲ್ಲಿ 30 ರನ್‌ಗೆ 2 ವಿಕೆಟ್ ಪಡೆದರು. ಭಾರತದ 16ರ ಹರೆಯದ ರಿಚಾ ಘೋಷ್ ಭಾರತದ ಪರ ಆಡಿದ ಮೊದಲ ಪಂದ್ಯದಲ್ಲಿ 23 ಎಸೆತಗಳಲ್ಲಿ 17 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News