ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಆರೋಪಿ ಚಾವ್ಲಾ ಬ್ರಿಟನ್‌ನಿಂದ ಭಾರತಕ್ಕೆ ಗಡಿಪಾರು

Update: 2020-02-13 15:46 GMT

ಹೊಸದಿಲ್ಲಿ,ಫೆ.13: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು 2000ರಲ್ಲಿ ಭಾರತ ಪ್ರವಾಸವನ್ನು ಕೈಗೊಂಡಿದ್ದ ಸಂದರ್ಭದಲ್ಲಿ ನಡೆದಿದ್ದ ಮ್ಯಾಚ್ ಫಿಕ್ಸಿಂಗ್ ಹಗರಣದ ಆರೋಪಿಯಾಗಿರುವ ಬುಕ್ಕಿ ಸಂಜೀವ ಚಾವ್ಲಾನನ್ನು ಬ್ರಿಟನ್‌ನಿಂದ ಗಡಿಪಾರು ಮಾಡಲಾಗಿದ್ದು,ಗುರುವಾರ ಲಂಡನ್‌ನಿಂದ ಭಾರತಕ್ಕೆ ಕರೆತರಲಾಗಿದೆ.

 1992ರಲ್ಲಿ ಬ್ರಿಟನ್ ಜೊತೆೆ ಗಡಿಪಾರು ಒಪ್ಪಂದದ ಬಳಿಕ ಇದೇ ಮೊದಲ ಬಾರಿಗೆ ಆರೋಪಿಯನ್ನು ಗಡಿಪಾರುಗೊಳಿಸುವ ಪ್ರಯತ್ನದಲ್ಲಿ ಭಾರತವು ಯಶಸ್ವಿಯಾಗಿದೆ. 2002ರ ಗುಜರಾತ ದಂಗೆಗಳಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಬೇಕಾಗಿದ್ದ ಸಮೀರಭಾಯಿ ವಿನುಭಾಯಿ ಪಟೇಲ್ ಎಂಬಾತ 2016ರಲ್ಲಿ ಭಾರತಕ್ಕೆ ಗಡಿಪಾರುಗೊಳ್ಳಲು ಸ್ವಯಂಇಚ್ಛೆಯಿಂದ ಒಪ್ಪಿಕೊಂಡಿದ್ದ.

2000 ಫೆಬ್ರವರಿ-ಮಾರ್ಚ್‌ನಲ್ಲಿ ದ.ಆಫ್ರಿಕಾ ಕ್ರಿಕೆಟ್ ತಂಡದ ಭಾರತ ಪ್ರವಾಸದ ಸಂದರ್ಭದಲ್ಲಿ ಮ್ಯಾಚ್ ಫಿಕ್ಸಿಂಗ್‌ಗಾಗಿ ಆ ತಂಡದ ಕ್ಯಾಪ್ಟನ್ ಆಗಿದ್ದ ದಿ.ಹ್ಯಾನ್ಸಿ ಕ್ರೋನಿಯೆ ಜೊತೆ ಶಾಮೀಲಾಗಿ ಸಂಚು ರೂಪಿಸುವಲ್ಲಿ ಚಾವ್ಲಾ ಪ್ರಮುಖ ಪಾತ್ರ ವಹಿಸಿದ್ದ ಎಂದು ಆರೋಪಿಸಲಾಗಿದೆ. ಪಂದ್ಯಗಳನ್ನು ಸೋಲಲು ಒಪ್ಪಿಕೊಂಡರೆ ಹೇರಳ ಹಣವನ್ನು ಸಂಪಾದಿಸಬಹುದು ಎಂದು ಚಾವ್ಲಾ ಕ್ರೋನಿಯೆಗೆ ತಿಳಿಸಿದ್ದನೆನ್ನಲಾಗಿದೆ. ಹಗರಣದ ಸಂಬಂಧ ದಿಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಚಾವ್ಲಾ ಮತ್ತು ಕ್ರೋನಿಯೆ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಚಾವ್ಲಾ 1999,ಆಗಸ್ಟ್‌ನಲ್ಲಿ ಇಬ್ಬರು ಇಂಗ್ಲಂಡ್ ಕ್ರಿಕೆಟ್ ಆಟಗಾರರಿಗೆ ಲಂಚ ನೀಡಲು ಪ್ರಯತ್ನಿಸಿದ್ದ ಆರೋಪಿಯೂ ಆಗಿದ್ದಾನೆ.

ಭಾರತವು 2016,ಮಾ.11ರಂದು ಚಾವ್ಲಾನ ಗಡಿಪಾರಿಗಾಗಿ ಬ್ರಿಟನ್‌ಗೆ ಕೋರಿಕೆಯನ್ನು ಸಲ್ಲಿಸಿತ್ತು. ಚಾವ್ಲಾನ ಗಡಿಪಾರು ಪ್ರಕರಣದ ವಿಚಾರಣೆಯನ್ನು ಆರಂಭದಲ್ಲಿ ಲಂಡನ್‌ನ ವೆಸ್ಟಮಿನ್‌ಸ್ಟರ್ ಕೋರ್ಟ್ ನಡೆಸಿದ್ದು,ಬಳಿಕ ಅದು ಬ್ರಿಟನ್ ಉಚ್ಚ ನ್ಯಾಯಾಲಯವನ್ನು ತಲುಪಿತ್ತು. ಅಂತಿಮವಾಗಿ,28 ದಿನಗಳಲ್ಲಿ ಚಾವ್ಲಾನನ್ನು ಭಾರತಕ್ಕೆ ಗಡಿಪಾರುಗೊಳಿಸುವಂತೆ ಜ.23ರಂದು ನ್ಯಾಯಾಲಯದ ಆದೇಶ ಹೊರಬಿದ್ದಿತ್ತು. ಮಧ್ಯಂತರ ಕ್ರಮವನ್ನು ಕೋರಿ ಚಾವ್ಲಾ ಕಳೆದ ವಾರ ಯುರೋಪಿನ ಮಾನವ ಹಕ್ಕುಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನಾದರೂ ಅದು ತಿರಸ್ಕೃತಗೊಂಡಿತ್ತು.

ಚಾವ್ಲಾನನ್ನು ದಿಲ್ಲಿಯ ತಿಹಾರ ಜೈಲಿನಲ್ಲಿ ಇರಿಸಲಾಗುತ್ತಿದ್ದು,ಗಡಿಪಾರು ಆದೇಶದ ಸಂದರ್ಭದಲ್ಲಿ ಬ್ರಿಟನ್ ಉಚ್ಚ ನ್ಯಾಯಾಲಯವು ವಿಧಿಸಿರುವ ಷರತ್ತುಗಳನ್ನು ಭಾರತ ಸರಕಾರವು ಪಾಲಿಸಲಿದೆ. ಸೂಕ್ತ ಸುರಕ್ಷತೆ ಮತ್ತು ಭದ್ರತೆಯೊಂದಿಗೆ ಪ್ರತ್ಯೇಕ ಕೋಣೆಯನ್ನು ಆತನಿಗೆ ಒದಗಿಸಲಾಗುತ್ತಿದೆ.

ಚಾವ್ಲಾ ಬ್ರಿಟನ್ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದಾಖಲೆಯಂತೆ ದಿಲ್ಲಿ ಸಂಜಾತ ಉದ್ಯಮಿಯಾಗಿದ್ದ ಆತ 1996ರಲ್ಲಿ ಬಿಸಿನೆಸ್ ವೀಸಾದಲ್ಲಿ ಬ್ರಿಟನ್‌ಗೆ ತೆರಳಿದ್ದ. 2000ರಲ್ಲಿ ಆತನ ಭಾರತೀಯ ಪಾಸ್‌ಪೋರ್ಟ್ ರದ್ದುಗೊಂಡಿತ್ತು. 2005ರಲ್ಲಿ ಬ್ರಿಟಿಷ್ ಪಾಸ್‌ಪೋರ್ಟ್ ಪಡೆದುಕೊಂಡಿದ್ದ ಆತ ಅಂದಿನಿಂದ ಬ್ರಿಟನ್ ಪ್ರಜೆಯಾಗಿದ್ದಾನೆ.

ಚಾವ್ಲಾನ ಗಡಿಪಾರು ಭಾರತದ ಬ್ಯಾಂಕ್‌ಗಳಿಗೆ ಕೋಟ್ಯಂತರ ರೂ.ಗಳನ್ನು ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ವಿಜಯ ಮಲ್ಯ ಮತ್ತು ನೀರವ ಮೋದಿ ಅವರ ಗಡಿಪಾರಿಗಾಗಿ ತಮ್ಮ ಪ್ರಯತ್ನಗಳಿಗೆ ಹೆಚ್ಚಿನ ಬಲ ನೀಡಲಿದೆ ಎಂಬ ವಿಶ್ವಾಸವನ್ನು ಭಾರತೀಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News