ಅಥ್ಲೇಟ್‌ಗಳಿಗೆ ಒಲಿಂಪಿಕ್ಸ್ ಗೆ ತರಬೇತಿ ಉದ್ದೇಶಕ್ಕಾಗಿ 1.3 ಕೋಟಿ ರೂ.ಬಿಡುಗಡೆ

Update: 2020-02-13 17:40 GMT

 ಹೊಸದಿಲ್ಲಿ , ಫೆ.13: ಅಥ್ಲೆಟಿಕ್ಸ್, ಶೂಟಿಂಗ್ ಮತ್ತು ಪ್ಯಾರಾ ಸ್ಪೋರ್ಟ್ಸ್ ಸೇರಿದಂತೆ ಏಳು ವಿಭಾಗಗಳಲ್ಲಿ ಕ್ರೀಡಾಪಟುಗಳ ತರಬೇತಿಗಾಗಿ ಮಿಷನ್ ಒಲಿಂಪಿಕ್ ಸೆಲ್ (ಎಂಒಸಿ) ಗುರುವಾರ 1.3 ಕೋಟಿ ರೂ. ಬಿಡುಗಡೆ ಮಾಡಿದೆ. ಜಾವೆಲಿನ್ ಎಸೆತಗಾರರಾದ ರೋಹಿತ್ ಯಾದವ್ ಮತ್ತು ಶಿವಪಾಲ್ ಸಿಂಗ್ ಅವರಿಗೆ ಸಲಕರಣೆಗಳ ಅವಶ್ಯಕತೆಗಳಿಗೆ ಎಂಒಸಿ ಒಪ್ಪಿಗೆ ನೀಡಿದೆ.

    ಶೂಟರ್‌ಗಳಾದ ಮಿರಾಝ್ ಅಹ್ಮದ್ ಖಾನ್ ಮತ್ತು ಚಿಂಕಿ ಯಾದವ್ ಅವರ ಆವಶ್ಯಕತೆಗಳಿಗೆ ಎಂಒಸಿ ಸ್ಪಂದಿಸಿದೆ. ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (ಟಾಪ್ಸ್) ಅಡಿಯಲ್ಲಿ ಕ್ರೀಡಾಪಟುಗಳ ಸಾಧನೆ ಕುರಿತು ಸಮಿತಿ ಚರ್ಚಿಸಿತು ಮತ್ತು ವಿವಿಧ ಕ್ರೀಡೆಗಳ ಕ್ರೀಡಾಪಟುಗಳ ಆರ್ಥಿಕ ಆವಶ್ಯಕತೆಯ ಪ್ರಸ್ತಾವನೆಗಳನ್ನು ಪರಿಶೀಲಿಸಿತು ಎಂದು ಎಸ್‌ಎಐ ಹೇಳಿಕೆಯಲ್ಲಿ ತಿಳಿಸಿದೆ.

ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾಕ್ಕೆ ಹೊಸ ಸೈಕಲ್‌ಗಳ ಖರೀದಿ ಮತ್ತು ಕಾರ್ಯಕ್ಷಮತೆ ಪರೀಕ್ಷೆ ಎಸ್‌ಆರ್‌ಎಂ ಎರ್ಗೋಮೀಟರ್ ಸೇರಿದಂತೆ ಇತರ ಉಪಕರಣಗಳನ್ನು ಖರೀದಿಸಲು ಹಣಕಾಸಿನ ನೆರವು ನೀಡಲಾಯಿತು.

     ಪ್ಯಾರಾ-ಬಿಲ್ಲುಗಾರರಾದ ಹರ್ವಿಂದರ್ ಸಿಂಗ್, ವಿವೇಕ್ ಚಿಕಾರಾ, ರಾಕೇಶ್ ಕುಮಾರ್ ಮತ್ತು ಶ್ಯಾಮ್ ಸುಂದರ್ ಅವರ ಸಲಕರಣೆಗಳ ಕೋರಿಕೆಯನ್ನು ಅಂಗೀಕರಿಸಲಾಯಿತು, ಈಜುಗಾರರ ಕ್ಲಬ್‌ಗೆ ಆರ್ಥಿಕ ನೆರವು, ತರಬೇತುದಾರರ ಸೌಲಭ್ಯ ಮತ್ತು ಇತರ ಶುಲ್ಕಗಳ ಪಾವತಿಗಾಗಿ ಈಜುಗಾರ ಶ್ರೀಹರಿ ನಟರಾಜ್ ಅವರ ಮನವಿಯನ್ನು ಸಹ ಅನುಮೋದಿಸಲಾಗಿದೆ.

  ಪ್ಯಾರಾ-ಬ್ಯಾಡ್ಮಿಂಟನ್ ಆಟಗಾರರಾದ ಸುಕಾಂತ್ ಕದಮ್, ಸುಹಾಸ್ ಯತಿರಾಜ್, ಮನೋಜ್ ಸರ್ಕಾರ್, ಪ್ರಮೋದ್ ಭಗತ್, ತರುಣ್ ಮತ್ತು ಕೃಷ್ಣನಗರ್ ಅವರಿಗೆ ಸ್ಪೇನ್‌ನಲ್ಲಿ ಅಂತರ್‌ರಾಷ್ಟ್ರೀಯ ಇವೆಂಟ್‌ನಲ್ಲಿ ಭಾಗವಹಿಸಲು ಹಣವನ್ನು ನೀಡಲಾಗಿದೆ. ಕಾರ್ಯಕ್ಷಮತೆಯ ಆಧಾರದ ಮೇಲೆ, ಕುಸ್ತಿಪಟುಗಳಾದ ಸಂದೀಪ್ ತೋಮರ್ ಮತ್ತು ಉತ್ಕರ್ಶ್ ಕಾಳೇ ಅವರನ್ನು ಟಾಪ್ ಯೋಜನೆಯಿಂದ ಕೈಬಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News