ಥಾಯ್ಲೆಂಡ್‌ಗೆ ಶಾಕ್ ನೀಡಿದ ಭಾರತ ಸೆಮಿ ಫೈನಲ್‌ಗೆ ಲಗ್ಗೆ

Update: 2020-02-14 18:46 GMT

ಹೈದರಾಬಾದ್,ಫೆ.14: ಫಿಲಿಪ್ಪೈನ್ಸ್‌ನ ನ ಮನಿಲಾದಲ್ಲಿ ಶುಕ್ರವಾರ ನಡೆದ ಏಶ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಲಕ್ಷ ಸೇನ್ ಹಾಗೂ ಡಬಲ್ಸ್ ಆಟಗಾರರು ಹೀರೊಗಳಾಗಿ ಹೊರಹೊಮ್ಮಿದ್ದು, ಸೆಮಿ ಫೈನಲ್ ತಲುಪಿದ ಭಾರತ ಪದಕವನ್ನು ದೃಢಪಡಿಸಿದೆ.

ಹಿರಿಯ ಆಟಗಾರರಾದ ಸಾಯಿ ಪ್ರಣೀತ್ ಹಾಗೂ ಕಿಡಂಬಿ ಶ್ರೀಕಾಂತ್ ಮೊದಲೆರಡು ಸಿಂಗಲ್ ್ಸ ಪಂದ್ಯಗಳಲ್ಲಿ ಸೋಲನುಭವಿಸಿದರು. ಒಂದು ಸಿಂಗಲ್ಸ್ ಹಾಗೂ ಎರಡು ಡಬಲ್ಸ್ ಪಂದ್ಯಗಳಲ್ಲಿ ಜಯ ಸಾಧಿಸಿದ ಭಾರತ ತಂಡ ಥಾಯ್ಲೆಂಡ್ ವಿರುದ್ಧ ಪಂದ್ಯವನ್ನು 3-2 ಅಂತರದಿಂದ ಗೆದ್ದುಕೊಂಡಿತು.

ಲಕ್ಷ ಸೇನ್ ಹಾಗೂ ಡಬಲ್ಸ್ ಆಟಗಾರರಾದ ಅರ್ಜುನ್-ಧುೃವ್ ಕಪಿಲಾ ಹಾಗೂ ಚಿರಾಗ್ ಶೆಟ್ಟಿ-ಶ್ರೀಕಾಂತ್ ತಾವಾಡಿದ ಪಂದ್ಯಗಳಲ್ಲಿ ಜಯ ಸಾಧಿಸಿ ಭಾರತ ತಂಡ ಥಾಯ್ಲೆಂಡ್‌ನ್ನು 3-2 ಅಂತರದಿಂದ ಮಣಿಸಲು ನೆರವಾದರು. ಈ ಮೂಲಕ ಏಶ್ಯನ್ ಟೀಮ್ ಇವೆಂಟ್‌ನಲ್ಲಿ ಭಾರತ ಎರಡನೇ ಪದಕ ಬಾಚಿಕೊಂಡಿತು. ಇದಕ್ಕೂ ಮೊದಲು ಹೈದರಾಬಾದ್‌ನಲ್ಲಿ ಭಾರತೀಯ ಪುರುಷರ ತಂಡ ಕಂಚಿನ ಪದಕ ಜಯಿಸಿತ್ತು.

ಭಾರತ ಶನಿವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಎರಡು ಬಾರಿಯ ಹಾಲಿ ಚಾಂಪಿಯನ್ ಇಂಡೋನೇಶ್ಯವನ್ನು ಎದುರಿಸಲಿದೆ. 2018ರ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ ಚೀನಾ ವಿರುದ್ಧ 1-3 ಅಂತರದಿಂದ ಸೋಲುಂಡಿತ್ತು.

ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹಿಂದೆ ಸರಿದ ಬಳಿಕ ಮೂರು ಸಿಂಗಲ್ಸ್ ಪಂದ್ಯಗಳಲ್ಲಿ ಭಾರತೀಯರು ವಿಶ್ವಾಸವಿರಿಸಿದ್ದರು. ಡಬಲ್ಸ್ ಆಟಗಾರರು ಯುವ ಆಟಗಾರ ಸೇನ್ ಜೊತೆ ಉತ್ತಮ ಪ್ರದರ್ಶನ ನೀಡಿ ಥಾಯ್ಲೆಂಡ್‌ಗೆ ಶಾಕ್ ನೀಡಿದರು.

ವಿಶ್ವದ ನಂ.11ನೇ ಆಟಗಾರ ಸಾಯಿ ಪ್ರಣೀತ್ ಭಾರತಕ್ಕೆ ಸೋಲಿನ ಆರಂಭ ನೀಡಿದರು. ಸಾಯಿ ವಿಶ್ವದ ನಂ.12ನೇ ಆಟಗಾರ ಕಾಂಟಫೋನ್ ವಾಂಗ್‌ಚಾರೊಯೆನ್ ಎದುರು 21-14, 14-21, 21-12 ಗೇಮ್‌ಗಳ ಅಂತರದಿಂದ ಸೋತರು.

ವಿಶ್ವದ ನಂ.15ನೇ ಆಟಗಾರ ಶ್ರೀಕಾಂತ್ ವಿಶ್ವದ ನಂ.15ನೇ ಆಟಗಾರ ಕುನ್ಲಾವುಟ್ ವಿಟಿಡಸರ್ನ್ ವಿರುದ್ಧ 20-22, 14-21 ನೇರ ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಧುೃವ ಕಪಿಲ ಹಾಗೂ ಎಂಆರ್ ಅರ್ಜುನ ಅವರು ಕಿಟ್ಟಿನುಪೊಂಗ್ ಕೆಡ್ರೆನ್ ಹಾಗೂ ಟನುಪಟ್ ವಿರಿಯಂಗ್‌ಕುರಾರನ್ನು 21-18, 22-20 ಗೇಮ್‌ಗಳ ಅಂತರದಿಂದ ಮಣಿಸಿ ಭಾರತವನ್ನು ಸ್ಪರ್ಧೆಯಲ್ಲಿ ಜೀವಂತವಾಗಿರಿಸಿದರು.

18ರ ಹರೆಯದ ಸೇನ್ ಅವರು ಸುಪ್ಪನ್ಯು ಅವಿಹಿಂಗ್‌ಸನನ್ ವಿರುದ್ಧ 21-19, 21-18 ಅಂತರದಿಂದ ಸುಲಭ ಜಯ ಸಾಧಿಸಿದರು. ಸೇನ್ ವಿಶ್ವದ ನಂ.45ನೇ ಆಟಗಾರನ ವಿರುದ್ಧ ಮೊದಲ ಗೇಮ್‌ನಲ್ಲಿ ಕಠಿಣ ಶ್ರಮಹಾಕಿದರೆ, ಎರಡನೇ ಗೇಮ್‌ನಲ್ಲಿ ಪ್ರಾಬಲ್ಯ ಮೆರೆದರು. ಭಾರತ 2-2ರಿಂದ ಟೈ ಸಾಧಿಸಿದಾಗ ಹೊಸ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಹಾಗೂ ಶ್ರೀಕಾಂತ್ ಎರಡನೇ ಡಬಲ್ಸ್ ಪಂದ್ಯದಲ್ಲಿ ಮಧ್ಯಮ ಗೇಮ್ ಕುಸಿತದಿಂದ ಚೇತರಿಸಿಕೊಂಡು ಮನೀಪಾಂಗ್ ಜಾಂಗ್‌ಜಿತ್ ಹಾಗೂ ನಿಪಿಟ್‌ಫಾನ್ ಫುಯಾಂಗ್‌ಫುಯಪೆಟ್ ವಿರುದ್ಧ 21-15, 16-21, 21-15 ಅಂತರದಿಂದ ಜಯ ಸಾಧಿಸಿದರು. ಚಿರಾಗ್ ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದರೆ, ಶ್ರೀಕಾಂತ್ ತಾನು ಡಬಲ್ಸ್ ಪಂದ್ಯಕ್ಕೂ ಸೈ ಎಂದು ತೋರಿಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News