‘ಡೈಮಂಡ್ ಪ್ರಿನ್ಸೆಸ್’ ಹಡಗಿನಲ್ಲಿದ್ದ ವೃದ್ಧ ದಂಪತಿ ಸಾವು

Update: 2020-02-20 17:50 GMT

ಟೋಕಿಯೊ (ಜಪಾನ್), ಫೆ. 20: ಜಪಾನ್‌ನಲ್ಲಿ ದಿಗ್ಬಂಧನದಲ್ಲಿರುವ ಕೊರೋನವೈರಸ್ ಪೀಡಿತ ಪ್ರವಾಸಿ ಹಡಗಿನ ಇಬ್ಬರು ಮಾಜಿ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.

ಮೃತಪಟ್ಟವರು 80 ವರ್ಷ ದಾಟಿರುವ ಓರ್ವ ಪುರುಷ ಮತ್ತು ಓರ್ವ ಮಹಿಳೆ ಎಂದು ಸರಕಾರಿ ಟಿವಿ ಎನ್‌ಎಚ್‌ಕೆ ಮತ್ತು ಇತರ ಮಾಧ್ಯಮಗಳು ಹೇಳಿವೆ. ‘ಡೈಮಂಡ್ ಪ್ರಿನ್ಸೆಸ್’ ಹಡಗಿನಲ್ಲಿ ಪತ್ತೆಯಾಗಿರುವ 600ಕ್ಕೂ ಅಧಿಕ ಕೊರೋನವೈರಸ್ ಸೊಂಕು ಪ್ರಕರಣಗಳ ಪೈಕಿ ಮೊದಲ ಸಾವಿನ ಪ್ರಕರಣ ಇದಾಗಿದೆ.

ಅವರು ಗಂಡ-ಹೆಂಡತಿಯರಾಗಿದ್ದು, ಇಬ್ಬರಲ್ಲೂ ಸೋಂಕಿಗೆ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಂಡಿದ್ದವು ಹಾಗೂ ಅವರನ್ನು ಫೆಬ್ರವರಿ 11 ಮತ್ತು 12ರಂದು ಹಡಗಿನಿಂದ ಕೆಳಗೆ ತಂದು ಆಸ್ಪತ್ರೆಗೆ ಸೇರಿಸಲಾಗಿತ್ತು.

ಹಡಗಿನಿಂದ ‘ಸ್ವಾತಂತ್ರ್ಯ’ದತ್ತ ಪ್ರವಾಸಿಗರು

ಕೊರೋನವೈರಸ್ ಪೀಡಿತ ‘ಡೈಮಂಡ್ ಪ್ರಿನ್ಸೆಸ್’ ಹಡಗಿನಿಂದ ಬುಧವಾರ 443 ಪ್ರಯಾಣಿಕರು ಹೊರಹೋಗಿದ್ದಾರೆ. 14 ದಿನಗಳ ದಿಗ್ಬಂಧನ ಅವಧಿಯಲ್ಲಿ ರೋಗಲಕ್ಷಣಗಳನ್ನು ತೋರಿಸದ ಹಾಗೂ ಕೋವಿಡ್-19 ಸೋಂಕು ಪತ್ತೆಯಾಗದ ಪ್ರಯಾಣಿಕರಿಗೆ ಹಡಗಿನಿಂದ ಹೊರಹೋಗಲು ಜಪಾನ್ ಸರಕಾರ ಅನುಮತಿ ನೀಡಿದೆ.

ಹಡಗಿನಿಂದ ಎಲ್ಲ ಪ್ರಯಾಣಿಕರನ್ನು ಹೊರ ಕಳುಹಿಸಲು ಕನಿಷ್ಠ ಮೂರು ದಿನಗಳು ಬೇಕಾಗಬಹುದು ಎಂದು ನಿರೀಕ್ಷಿಸಲಾಗಿದೆ.

 ಗುರುವಾರ ಪ್ರಯಾಣಿಕರ ಇನ್ನೂ ಒಂದು ತಂಡವು ಹಡಗಿನಿಂದ ಹೊರಬಿದ್ದಿದೆ. ಪ್ರವಾಸಿಗರನ್ನು ಹೊತ್ತ ಹಳದಿ ಬಸ್‌ಗಳು ರೈಲು ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಿಗೆ ತೆರಳಿವೆ.

ಪ್ರವಾಸಿಗರನ್ನು ತಿರುಗಾಡಲು ಬಿಟ್ಟಿರುವುದಕ್ಕೆ ಆಕ್ಷೇಪ

ಕೊರೋನವೈರಸ್ ಸೋಂಕಿರದ ‘ಡೈಮಂಡ್ ಪ್ರಿನ್ಸೆಸ್’ ಹಡಗಿನ ಪ್ರಯಾಣಿಕರನ್ನು ಜಪಾನ್‌ನ ಪ್ರಸಿದ್ಧ ನಗರಗಳಲ್ಲಿ ಮುಕ್ತವಾಗಿ ತಿರುಗಾಡಲು ಬಿಟ್ಟಿರುವುದನ್ನು ಪ್ರಶ್ನಿಸಲಾಗುತ್ತಿದೆ.

‘‘ಹಡಗಿನಿಂದ ಹೊರಗೆ ಬಂದಿರುವುದು ನಿಜಕ್ಕೂ ಸುರಕ್ಷಿತವೇ?’’ ಎಂದು ‘ನಿಕ್ಕಾನ್ ಸ್ಪೋರ್ಟ್ಸ್’ ಟ್ಯಾಬ್ಲಾಯಿಡ್‌ನ ವರದಿಯೊಂದು ಪ್ರಶ್ನಿಸಿದೆ.

ಫೆಬ್ರವರಿ 15ರಂದು ನನ್ನನ್ನು ತಪಾಸಣೆಗೆ ಒಳಪಡಿಸಿದರು ಹಾಗೂ ನಾಲ್ಕು ದಿನಗಳ ಬಳಿಕ ಹೊರಗೆ ಬಿಟ್ಟರು ಎಂಬುದಾಗಿ ಪ್ರಯಾಣಿಕರೊಬ್ಬರು ಹೇಳಿರುವುದನ್ನು ಪತ್ರಿಕೆ ಉಲ್ಲೇಖಿಸಿದೆ.

‘‘ಈ ನಾಲ್ಕು ದಿನಗಳ ಅವಧಿಯಲ್ಲಿ ನನಗೆ ಸೋಂಕು ತಗಲಿರುವ ಸಾಧ್ಯತೆಯಿದೆ ಎಂದು ನನಗನಿಸುತ್ತದೆ. ‘ಇದು ಸರಿಯೇ?’ ಎಂದು ನಾನು ಯೋಚಿಸುತ್ತಿದ್ದೇನೆ ಎಂದು ಆ ಪ್ರಯಾಣಿಕ ಹೇಳಿದ್ದಾರೆ ಎಂದು ‘ನಿಕ್ಕಾನ್ ಸ್ಪೋರ್ಟ್ಸ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News