×
Ad

ರಶ್ಯ ನಂಟನ್ನು ನಿರಾಕರಿಸಿದರೆ ಅಸಾಂಜ್‌ಗೆ ಟ್ರಂಪ್ ಕ್ಷಮಾದಾನ ನೀಡಬಯಸಿದ್ದರು

Update: 2020-02-20 23:31 IST

ಲಂಡನ್, ಫೆ. 20: 2016ರ ಚುನಾವಣಾ ಪ್ರಚಾರದ ಅವಧಿಯಲ್ಲಿ ತನ್ನ ಎದುರಾಳಿಯ ಇಮೇಲ್‌ಗಳನ್ನು ರಶ್ಯ ಸೋರಿಕೆ ಮಾಡಿತು ಎನ್ನುವುದನ್ನು ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ ನಿರಾಕರಿಸಿದರೆ ಅವರನ್ನು ಕ್ಷಮಿಸುವ ಭರವಸೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ ಎಂದು ಲಂಡನ್ ನ್ಯಾಯಾಲಯವೊಂದಕ್ಕೆ ಬುಧವಾರ ತಿಳಿಸಲಾಗಿದೆ.

ಈ ಕೊಡುಗೆಯನ್ನು ಅಮೆರಿಕದ ಮಾಜಿ ಸಂಸದ ಡ್ಯಾನ ರೋಹ್ರಬಾಕರ್ ಮೂಲಕ ಟ್ರಂಪ್ ನೀಡಿದ್ದಾರೆ ಎಂದು ಅಸಾಂಜ್ ಪರ ವಕೀಲೆ ಜೆನಿಫರ್ ರಾಬಿನ್ಸನ್ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯೊಂದರಲ್ಲಿ ತಿಳಿಸಿದ್ದಾರೆ ಎಂದು ಬ್ರಿಟನ್‌ನ ಪ್ರೆಸ್ ಅಸೋಸಿಯೇಶನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ ಅಸಾಂಜ್ ಪರ ವಕೀಲರು ಈ ಹೇಳಿಕೆ ನೀಡಿದ್ದಾರೆ. ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಅಮೆರಿಕದಲ್ಲಿ ವಿಚಾರಣೆ ಎದುರಿಸಲು ಅಸಾಂಜ್‌ರನ್ನು ಗಡಿಪಾರುಗೊಳಿಸುವಂತೆ ಕೋರಿ ಅಮೆರಿಕ ಸಲ್ಲಿಸಿದ ಮನವಿ ಸೋಮವಾರ ವಿಚಾರಣೆಗೆ ಬರಲಿದೆ.

 ಅಮೆರಿಕದಲ್ಲಿ ನಡೆಯುವ ವಿಚಾರಣೆಯಲ್ಲಿ ಅಸಾಂಜ್ ದೋಷಿ ಎಂದು ಸಾಬೀತಾದರೆ, ಅವರಿಗೆ 175 ವರ್ಷಗಳ ಅವಧಿಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.

ಕಪೋಲಕಲ್ಪಿತ, ಸಂಪೂರ್ಣ ಸುಳ್ಳು: ಶ್ವೇತಭವನ

ಆದರೆ, ರಶ್ಯಕ್ಕೆ ಸಂಬಂಧಿಸಿದ ವಿವಾದದಲ್ಲಿ ನೆರವು ನೀಡಿದರೆ ಅಸಾಂಜ್‌ಗೆ ಕ್ಷಮೆ ನೀಡುವ ಕೊಡುಗೆಯನ್ನು ಟ್ರಂಪ್ ನೀಡಿದ್ದಾರೆ ಎನ್ನುವುದನ್ನು ಶ್ವೇತಭವನ ತಳ್ಳಿಹಾಕಿದೆ. ಚುನಾವಣಾ ಪ್ರಚಾರ ಅವಧಿಯಲ್ಲಿ ಟ್ರಂಪ್ ತಂಡವು ರಶ್ಯದೊಂದಿಗೆ ಸಂಪರ್ಕದಲ್ಲಿತ್ತು ಎನ್ನುವ ಆರೋಪವು ಟ್ರಂಪ್‌ರನ್ನು ಮಗ್ಗುಲ ಮುಳ್ಳಾಗಿ ಕಾಡುತ್ತಿದೆ.

‘‘ಡ್ಯಾನ ರೋಹ್ರಬಾಕರ್ ಓರ್ವ ಮಾಜಿ ಸಂಸದ ಎನ್ನುವುದನ್ನು ಹೊರತುಪಡಿಸಿ ಅವರ ಬಗ್ಗೆ ಟ್ರಂಪ್‌ಗೆ ಬೇರೇನೂ ಗೊತ್ತಿಲ್ಲ. ಈ ವಿಷಯದಲ್ಲಿ ಅಥವಾ ಬಹುತೇಕ ಯಾವುದೇ ವಿಷಯದಲ್ಲಿ ರೋಹ್ರಬಾಕರ್‌ರೊಂದಿಗೆ ಟ್ರಂಪ್ ಯಾವತ್ತೂ ಮಾತನಾಡಿಲ್ಲ. ಇದು ಸಂಪೂರ್ಣ ಕಪೋಲಕಲ್ಪಿತ ವಿಷಯ ಮತ್ತು ಸಂಪೂರ್ಣ ಸುಳ್ಳು’’ ಎಂದು ಟ್ರಂಪ್‌ರ ಪತ್ರಿಕಾ ಕಾರ್ಯದರ್ಶಿ ಸ್ಟೀಫನೀ ಗ್ರೀಶಮ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News