ಭಾರತ ಭೇಟಿ ವೇಳೆ ಧಾರ್ಮಿಕ ಸ್ವಾತಂತ್ರದ ಬಗ್ಗೆ ಟ್ರಂಪ್ ಧ್ವನಿ ಎತ್ತಲಿದ್ದಾರೆ: ಅಮೆರಿಕ ಅಧಿಕಾರಿ

Update: 2020-02-22 14:42 GMT

ವಾಶಿಂಗ್ಟನ್,ಫೆ.22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂದಿನ ವಾರ ಭಾರತಕ್ಕೆ ಚೊಚ್ಚಲ ಭೇಟಿ ನೀಡುವ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ಧಾರ್ಮಿಕ ಸ್ವಾತಂತ್ರದ ವಿಷಯಗಳನ್ನು ಪ್ರಸ್ತಾಪಿಸಲಿದ್ದಾರೆಂದು ಶ್ವೇತಭವನ ಶುಕ್ರವಾರ ತಿಳಿಸಿದೆ.

     

‘‘ಅಧ್ಯಕ್ಷ ಟ್ರಂಪ್ ಅವರು ಭಾರತ ಭೇಟಿ ಸಂದರ್ಭ ತನ್ನ ಬಹಿರಂಗ ಹೇಳಿಕೆಗಳಲ್ಲಿ ಮತ್ತು ಖಾಸಗಿ ಮಾತುಕತೆಯಲ್ಲಿ ಪ್ರಜಾಪ್ರಭುತ್ವದ ಪರಂಪರೆ ಹಾಗೂ ಧಾರ್ಮಿಕ ಸ್ವಾತಂತ್ರದ ಬಗ್ಗೆ ಮಾತನಾಡಲಿದ್ದಾರೆ. ಅವರು ಈ ವಿಷಯಗಳನ್ನು ಅದರಲ್ಲೂ ನಿರ್ದಿಷ್ಟವಾಗಿ ಅಮೆರಿಕ ಆಡಳಿತಕ್ಕೆ ಅತ್ಯಂತ ಮಹತ್ವದ್ದಾಗಿರುವ ಧಾರ್ಮಿಕ ಸ್ವಾತಂತ್ರದ ಬಗ್ಗೆ ಮಾತನಾಡಲಿದ್ದಾರೆ’’ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ವಿಡಿಯೋ ಕಾನ್ಫರೆನ್ಸ್ ಪತ್ರಿಕಾಗೋಷ್ಠಿಯೊಂದರಲ್ಲಿ ಸುದ್ದಿ ಗಾರರಿಗೆ ತಿಳಿಸಿದ್ದಾರೆ. ಭಾರತದ ಪ್ರಜಾತಾಂತ್ರಿಕ  ಪರಂಪರೆಗಳು ಹಾಗೂ ಸಂಸ್ಥೆಗಳ ಬಗ್ಗೆ ಅಮೆರಿಕವು ಅಪಾರವಾದ ಗೌರವವನ್ನು ಹೊಂದಿದೆಯೆಂದು ಅವರು ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಥವಾ ರಾಷ್ಟ್ರೀಯ ಪೌರ ನೋಂದಣಿ (ಎನ್‌ಆರ್‌ಸಿ) ಕುರಿತಾಗಿ ಪ್ರಧಾನಿ ಜೊತೆ ಡೊನಾಲ್ಡ್ ಟ್ರಂಪ್ ಚರ್ಚಿಸಲಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

 ‘‘ಸಾರ್ವತ್ರಿಕ ಮೌಲ್ಯಗಳನ್ನು, ಕಾನೂನಿನ ಪ್ರಭುತ್ವವನ್ನು ಎತ್ತಿಹಿಡಿಯುವ ಬದ್ಧತೆಗಳನ್ನು ನಾವಿಬ್ಬರೂ ಹಂಚಿಕೊಂಡಿದ್ದೇವೆ. ಭಾರತದ ಪ್ರಜಾತಾಂತ್ರಿಕ ಪರಂಪರೆಗಳು ಹಾಗೂ ಸಂಸ್ಥೆಗಳ ಬಗ್ಗೆ ನಮಗೆ ಅಪಾರವಾದ ಗೌರವವಿದೆ ಹಾಗೂ ಈ ಪರಂಪರೆಗಳನ್ನು ಎತ್ತಿ ಹಿಡಿಯಲು ನಾವು ಭಾರತವನ್ನು ಉತ್ತೇಜಿಸುವುದನ್ನು ಮುಂದುವರಿಸಲಿದ್ದೇವೆ’’ ಎಂದು ಅಧಿಕಾರಿ ತಿಳಿಸಿದ್ದಾರೆ.

 ಸಿಎಎ,ಎನ್‌ಆರ್‌ಸಿ ವಿರುದ್ಧ ದೇಶಾದ್ಯಂತ ಬಲವಾದ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ಈ ಹೇಳಿಕೆ ಹೆಚ್ಚಿನ ಮಹತ್ವ ಪಡೆದಿದೆ.

  ‘‘ ಪ್ರಧಾನಿ ಮೋದಿ ಜೊತೆ ನಡೆಸುವ ಮಾತುಕತೆಗಳಲ್ಲಿ ಅಧ್ಯಕ್ಷರು ಈ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆಂದು ನಾನು ಭಾವಿಸುತ್ತೇನೆ ಹಾಗೂ ಭಾರತವು ತನ್ನ ಪ್ರಜಾತಾಂತ್ರಿಕ ಮೌಲ್ಯಗಳನ್ನು ಎತ್ತಿಹಿಡಿಯುವುದನ್ನು, ಧಾರ್ಮಿಕ ಅಲ್ಪಸಂಖ್ಯಾತರನ್ನು ಗೌರವಿಸುವುದನ್ನು ಮುಂದುವರಿಸುವುದಾಗಿ ಇಡೀ ಜಗತ್ತು ನಿರೀಕ್ಷಿಸುತ್ತಿದೆ’’ ಎದಂು ಅಧಿಕಾರಿ ಹೇಳಿದ್ದಾರೆ..

‘‘ಭಾರತದ ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ, ಧಾರ್ಮಿಕ ಅಲ್ಪಸಂಖ್ಯಾತರಿಗೆ ಗೌರವ, ಎಲ್ಲಾ ಧರ್ಮಗಳವರನ್ನು ಸರಿಸಮಾನವಾಗಿ ನೋಡಿಕೊಳ್ಳುವುದನ್ನು ಭಾರತೀಯ ಸಂವಿಧಾನ ಪ್ರತಿಪಾದಿಸುತ್ತದೆ. ಹೀಗಾಗಿ ಅಮೆರಿಕ ಅಧ್ಯಕ್ಷರು ಈ ಬಗ್ಗೆ ಮಾತನಾಡಲಿದ್ದಾರೆಂಬುದಾಗಿ ನನಗೆ ಖಾತರಿಯಿದೆ ಎಂದು ಅವರು ಹೇಳಿದ್ದಾರೆ.

ಪ್ರಬಲವಾದ ಪ್ರಜಾತಾಂತ್ರಿಕ ತಳಹದಿಯನ್ನು ಹೊಂದಿರುವ ಭಾರತವು ಶ್ರೀಮಂತವಾದ ಧಾರ್ಮಿಕ, ಭಾಷಾ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ ಎಂಬುದಾಗಿ ಹೇಳಿದ್ದಾರೆ. ಭಾರತವು ಜಗತ್ತಿನ ನಾಲ್ಕು ಪ್ರಮುಖ ಧರ್ಮಗಳ ಜನ್ಮಭೂಮಿಯೂ ಆಗಿದೆ ಎಂದವರು.

  ‘‘ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಆನಂತ ಪ್ರಧಾನಿ ಮೋದಿ ತನ್ನ ಮೊದಲ ಭಾಷಣದಲ್ಲಿ ಭಾರತದ ಧಾರ್ಮಿಕ ಅಲ್ಪಸಂಖ್ಯಾತರನ್ನು ದೇಶದ ಮುಖ್ಯವಾಹಿನಿಯಲ್ಲಿ ಒಳಪಡಿಸಿಕೊಳ್ಳುವುದಕ್ಕೆ ಆದ್ಯತೆ ನೀಡುವುದಾಗಿ ಹೇಳಿದ್ದರು ಮತ್ತು ನಿಶ್ಚಿತವಾಗಿಯೂ ಭಾರತವು ಕಾನೂನಿನ ಪ್ರಭುತ್ವದಡಿ ಧಾರ್ಮಿಕ ಸ್ವಾತಂತ್ರ ಹಾಗೂ ಎಲ್ಲನ್ನೂ ಸಮಾನವಾಗಿ ನಡೆಸಿಕೊಳ್ಳುವುದರತ್ತ ಜಗತ್ತು ಎದುರುನೋಡುತ್ತಿದೆ’’ ಎಂದು ಹಿರಿಯ ಆಡಳಿತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News