ವಿಂಡೀಸ್‌ನ ಸಮ್ಮಿ ಗೆ ಪಾಕಿಸ್ತಾನದ ಗೌರವ ಪೌರತ್ವ

Update: 2020-02-22 17:07 GMT

ಲಾಹೋರ್, ಫೆ.22: ದೇಶಕ್ಕೆ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮರಳಲು ಮುಖ್ಯ ಪಾತ್ರವಹಿಸಿದ್ದ ವೆಸ್ಟ್‌ಇಂಡೀಸ್‌ನ ಮಾಜಿ ನಾಯಕ ಡರೆನ್ ಸಮ್ಮಿಗೆ ಪಾಕಿಸ್ತಾನ ಸರಕಾರ ಗೌರವ ಪೌರತ್ವ ನೀಡಿ ಗೌರವಿಸಲು ನಿರ್ಧರಿಸಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಶನಿವಾರ ತಿಳಿಸಿದೆ. ಪ್ರಸ್ತುತ ಐದನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಪೇಶಾವರ ಝಲ್ಮಿ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿರುವ ಸಮ್ಮಿಗೆ ಪಾಕಿಸ್ತಾನದ ಗೌರವ ಪೌರತ್ವ ಹಾಗೂ ಪಾಕ್‌ನ ಅತ್ಯುನ್ನತ ಗೌರವ ನೀಶಾನ್-ಎ-ಹೈದರ್ ಪ್ರಶಸ್ತಿಯನ್ನು ಅಧ್ಯಕ್ಷ ಆರಿಫ್ ಅಲ್ವಿ ಮಾ.23 ರಂದು ಪ್ರದಾನಿಸಲಿದ್ದಾರೆ ಎಂದು ಪಿಸಿಬಿ ತಿಳಿಸಿದೆ. ಸಮ್ಮಿ ಪಿಎಸ್‌ಎಲ್ ಟೂರ್ನಿ ಆರಂಭವಾದಾಗಿನಿಂದ ಟೂರ್ನಿಯಲ್ಲಿ ಆಡುತ್ತಿದ್ದಾರೆ. 2017ರಲ್ಲಿ ಲಾಹೋರ್‌ಗೆ ಆಗಮಿಸಲು ಒಪ್ಪಿಕೊಂಡಿದ್ದ ಸಮ್ಮಿ ಪಾಕಿಸ್ತಾನಕ್ಕೆ ಅಂತರ್‌ರಾಷ್ಟ್ರೀಯ ಕ್ರಿಕೆಟ್ ವಾಪಸ್ ಬರಲು ಪಿಸಿಬಿಗೆ ನೆರವಾಗಿದ್ದರು. ಭದ್ರತಾ ಭೀತಿಯಿಂದಾಗಿ ಅನೇಕ ವಿದೇಶಿ ಆಟಗಾರರು ಪಾಕ್ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕಿದ ಸಂದರ್ಭದಲ್ಲಿ ಸಮ್ಮಿ ಪಾಕಿಸ್ತಾನಕ್ಕೆ ಬರಲು ಸಮ್ಮತಿ ವ್ಯಕ್ತಪಡಿಸಿದ್ದರು.

ಲಾಹೋರ್‌ನಲ್ಲಿ ನಡೆದ 2ನೇ ಆವೃತ್ತಿಯ ಪಿಎಸ್‌ಎಲ್‌ನಲ್ಲಿ ಪೇಶಾವರ ತಂಡ ಪ್ರಶಸ್ತಿ ಗೆಲ್ಲಲು ಸಮ್ಮಿ ತಂಡದ ನಾಯಕತ್ವವಹಿಸಿದ್ದರು. ಸಮ್ಮಿ ದೇಶವೊಂದರ ಗೌರವ ಪೌರತ್ವ ಪಡೆಯುತ್ತಿರುವ ಮೂರನೇ ಅಂತರ್‌ರಾಷ್ಟ್ರೀಯ ಕ್ರಿಕೆಟಿಗನಾಗಿದ್ದಾರೆ. ಸಮ್ಮಿಗಿಂತ ಮೊದಲು ಆಸ್ಟ್ರೇಲಿಯದ ಮ್ಯಾಥ್ಯೂ ಹೇಡನ್ ಹಾಗೂ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್‌ಗೆ 2007ರ ವಿಶ್ವಕಪ್‌ನ ಬಳಿಕ ಸೈಂಟ್ ಕಿಟ್ಸ್ ಸರಕಾರ ಗೌರವಾನ್ವಿತ ಪೌರತ್ವ ನೀಡಿತ್ತು.

ಸಮ್ಮಿ ಎರಡು ಬಾರಿ ವೆಸ್ಟ್‌ಇಂಡೀಸ್ ತಂಡ ಟ್ವೆಂಟಿ-20 ವಿಶ್ವಕಪ್ ಜಯಿಸಿದಾಗ ತಂಡದ ನಾಯಕತ್ವವಹಿಸಿಕೊಂಡಿದ್ದು, ಪಾಕಿಸ್ತಾನದಲ್ಲೂ ಜನಪ್ರಿಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News