ಏಶ್ಯನ್ ಕುಸ್ತಿ ಟೂರ್ನಿ: ಬಜರಂಗ್, ರವಿ ಫೈನಲ್‌ಗೆ

Update: 2020-02-22 17:28 GMT

ಹೊಸದಿಲ್ಲಿ,ಫೆ.22: ಬಜರಂಗ್ ಪೂನಿಯಾ ಹಾಗೂ ರವಿ ದಾಹಿಯಾ ಸಹಿತ ನಾಲ್ವರು ಕುಸ್ತಿಪಟುಗಳು ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಶನಿವಾರ ನಡೆದ ಪುರುಷರ ಫ್ರೀಸ್ಟೈಲ್ ಸ್ಪರ್ಧೆಯ ಮೊದಲ ದಿನ ಫೈನಲ್ ತಲುಪಿದ್ದಾರೆ.

 65 ಕೆಜಿ ಸ್ಪರ್ಧೆಯ ಫೈನಲ್ ಹಾದಿಯಲ್ಲಿ ಕೇವಲ ಎರಡು ಅಂಕ ಬಿಟ್ಟುಕೊಟ್ಟಿರುವ ಬಜರಂಗ್, ಚಿನ್ನದ ಪದಕಕ್ಕಾಗಿ ಜಪಾನ್‌ನ ಟಕುಟೊ ಒಟೊಗುರೊರನ್ನು ಎದುರಿಸಲಿದ್ದಾರೆ. ಬಜರಂಗ್ ಎಲ್ಲ ಸ್ಪರ್ಧೆಗಳನ್ನು ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಗೆದ್ದುಕೊಂಡರು. 57 ಕೆಜಿ ವಿಭಾಗದಲ್ಲಿ ರವಿ ದಾಹಿಯಾ ಜಪಾನ್‌ನ ಯುಕಿ ತಹಕಹಶಿ(14-5) ವಿರುದ್ಧ ಉತ್ತಮ ಪ್ರದರ್ಶನ ನೀಡಿದರು. ಸೆಮಿ ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ನುರಿಸ್ಲಾಮ್ ಸನಯೆವ್ ಅವರು ರವಿಗೆ ಸುಲಭವಾಗಿ ಶರಣಾದರು. ರವಿ ಚಿನ್ನದ ಪದಕದ ಸುತ್ತಿನಲ್ಲಿ ತಜಿಕಿಸ್ತಾನದ ಹಿಕ್ಮಟುಲ್ಲೊ ವೊಹಿಡೊವ್‌ರನ್ನು ಎದುರಿಸಲಿದ್ದಾರೆ. 79 ಕೆಜಿ ವಿಭಾಗದಲ್ಲಿ ಗೌರವ್ ಬಲಿಯನ್ ಹಾಗೂ 97 ಕೆಜಿ ವಿಭಾಗದಲ್ಲಿ ಸತ್ಯವರ್ತ್ ಕಡಿಯನ್ ಕೂಡ ಫೈನಲ್ ತಲುಪಿದರು. ಇಂದು ಸ್ಪರ್ಧೆಯಲ್ಲಿದ್ದ ಐವರು ಭಾರತೀಯರ ಪೈಕಿ ನವೀನ್ ಮಾತ್ರ 70 ಕೆಜಿ ವಿಭಾಗದಲ್ಲಿ ಫೈನಲ್ ತಲುಪಲಿಲ್ಲ. ನವೀನ್ ಸೆಮಿ ಫೈನಲ್‌ನಲ್ಲಿ ಇರಾನ್‌ನ ಅಮಿರ್ ಹುಸೇನ್ ಅಲಿ ವಿರುದ್ಧ 2-3 ಅಂತರದಿಂದ ಶರಣಾದರು. ಕಂಚಿನ ಪದಕಕ್ಕಾಗಿ ಕಝಖ್‌ಸ್ತಾನದ ಮೆರ್ಝಾನ್ ಅಶಿರೊವ್‌ರನ್ನು ನವೀನ್ ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News