ಮೊದಲ ಟೆಸ್ಟ್: ಬೌಲ್ಟ್ ಆಲ್‌ರೌಂಡ್ ಆಟ, ಕಿವೀಸ್ ಬಿಗಿ ಹಿಡಿತ

Update: 2020-02-23 08:03 GMT

ವೆಲ್ಲಿಂಗ್ಟನ್, ಫೆ. 23: ಟ್ರೆಂಟ್ ಬೌಲ್ಟ್ ಆಲ್‌ರೌಂಡ್ ಆಟದ ನೆರವಿನಿಂದ ನ್ಯೂಝಿಲ್ಯಾಂಡ್ ತಂಡ ಇಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ.

ಮೊದಲ ಇನಿಂಗ್ಸ್‌ನಲ್ಲಿ 183 ರನ್ ಹಿನ್ನಡೆ ಅನುಭವಿಸಿದ್ದ ಭಾರತ ರವಿವಾರ ಮೂರನೇ ದಿನದಾಟದಂತ್ಯಕ್ಕೆ ತನ್ನ 2ನೇ ಇನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿದೆ. ಬೌಲ್ಟ್ ಮೂರು ವಿಕೆಟ್‌ಗಳನ್ನು(3-27) ಉರುಳಿಸಿ ಭಾರತಕ್ಕೆ ಆರಂಭದಲ್ಲೇ ಆಘಾತ ನೀಡಿದ್ದಾರೆ. ಅಜಿಂಕ್ಯ ರಹಾನೆ(25) ಹಾಗೂ ಹನುಮ ವಿಹಾರಿ(15)ಕ್ರೀಸ್ ಕಾಯ್ದುಕೊಂಡಿದ್ದಾರೆ.ಮಾಯಾಂಕ್ ಅಗರ್ವಾಲ್(58,99 ಎಸೆತ, 7 ಬೌಂಡರಿ,1 ಸಿಕ್ಸರ್) ಅರ್ಧಶತಕದ ಆಸರೆ ನೀಡಿದ್ದಾರೆ.

 ಇದಕ್ಕೂ ಮೊದಲು 5 ವಿಕೆಟ್‌ಗಳ ನಷ್ಟಕ್ಕೆ 216 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ನ್ಯೂಝಿಲ್ಯಾಂಡ್ 348 ರನ್‌ಗೆ ಆಲೌಟಾಯಿತು. ಬಾಲಂಗೋಚಿಗಳಾದ ಟ್ರೆಂಟ್ ಬೌಲ್ಟ್(38,24 ಎಸೆತ, 5 ಬೌಂಡರಿ,1 ಸಿಕ್ಸರ್) ಹಾಗೂ ಕೈಲ್ ಜಮೀಸನ್(44,45 ಎಸೆತ, 1 ಬೌಂಡರಿ,4 ಸಿಕ್ಸರ್)ಕೊನೆಯ ವಿಕೆಟ್‌ಗೆ 38 ರನ್ ಜೊತೆಯಾಟ ನಡೆಸಿ ಗಮನ ಸೆಳೆದರು.

ಪಾದಾರ್ಪಣೆ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ 4 ವಿಕೆಟ್ ಪಡೆದು ಮಿಂಚಿದ್ದ ಕೈಲ್ ಜಮೀಸನ್ ಬ್ಯಾಟಿಂಗ್‌ನಲ್ಲೂ ತನ್ನ ಕೈಚಳಕ ತೋರಿದ್ದು, 8ನೇ ವಿಕೆಟ್ ಜೊತೆಯಾಟದಲ್ಲಿ ಗ್ರಾಂಡ್‌ಹೋಮ್ ಜೊತೆ 71 ರನ್ ಸೇರಿಸಿದರು. ಭಾರತದ ಪರ ವೇಗದ ಬೌಲರ್ ಇಶಾಂತ ಶರ್ಮಾ(5-68) ಹಾಗೂ ಸ್ಪಿನ್ನರ್ ಆರ್.ಅಶ್ವಿನ್(3-99)ಎಂಟು ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News