ಕೊರೋನ ವೈರಸ್: ಚೀನಾದಲ್ಲಿ ಸಾವಿನ ಸಂಖ್ಯೆ 2442ಕ್ಕೇರಿಕೆ

Update: 2020-02-23 18:03 GMT

ವುಹಾನ್‌, ಫೆ.23: ಕೊರೋನ ವೈರಸ್ ಸೋಂಕಿನ ಅಟ್ಟಹಾಸಕ್ಕೆ ತತ್ತರಿಸಿರುವ ಚೀನಾದಲ್ಲಿ ಶನಿವಾರ 97 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ದೇಶದಾದ್ಯಂತ ಈ ಮಾರಣಾಂತಿಕ ಸೋಂಕಿಗೆ ಬಲಿಯಾದವರ ಸಂಖ್ಯೆ 2442ಕ್ಕೇರಿದೆ ಎಂದು ಚೀನಿ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನ ಸೋಂಕಿನ ಉಗಮಸ್ಥಾನವಾದ ಹುಬೈ ಪ್ರಾಂತ್ಯದ ವುಹಾನ್ ನಗರಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞ ವೈದ್ಯರ ತಂಡವೊಂದು ರವಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಶನಿವಾರದವರೆಗೆ ಕೊರೋನ ವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ 2442ಕ್ಕೇರಿದೆ ಹಾಗೂ 31 ಪ್ರಾಂತೀಯ ಮಟ್ಟದ ಪ್ರದೇಶಗಳಲ್ಲಿ ಒಟ್ಟು 79936 ಮಂದಿ ಕೊರೋನ ಸೋಂಕು ತಗಲಿರುವುದಾಗಿ ವರದಿಯಾಗಿದೆಯೆಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ)ವು ರವಿವಾರ ತಿಳಿಸಿದೆ.

ಶನಿವಾರ ಹುಬೈ ಪ್ರಾಂತ್ಯದಲ್ಲಿ 96 ಮಂದಿ ಹಾಗೂ ಗುವಾಂಗ್‌ಡೊಂಗ್ ಪ್ರಾಂತದಲ್ಲಿ ಓರ್ವ ಕೊರೊನ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರ ಜೊತೆಗೆ ಹೊಸತಾಗಿ 630 ಸೋಂಕಿನ ಪ್ರಕರಣಗಳು ದೃಢಪಟ್ಟಿವೆ ಎಂದು ಆಯೋಗ ತಿಳಿಸಿದೆ.

ಕೊರೋನ ವೈರಸ್ ಸೋಂಕಿನಿಂದ ಗುಣಮುಖರಾಗಿ ಹಾಗೂ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿರುವ ವ್ಯಕ್ತಿಗಳ ಸಂಖ್ಯೆಯು, ಹೊಸದಾಗಿ ಸೋಂಕು ತಗಲಿರುವ ವ್ಯಕ್ತಿಗಳಿಗಿಂತ ಅಧಿಕವಾಗಿದ್ದು, ಈ ಮಾರಕ ಸೋಂಕುರೋಗದ ಪ್ರಕರಣಗಳು ಇಳಿಮುಖವಾಗುತ್ತಿರುವುದರ ಸೂಚನೆಯೆಂದು ಅದು ತಿಳಿಸಿದೆ.

 ಶನಿವಾರದಂದು 2230 ಮಂದಿ ಚೇತರಿಕೆಗೊಂಡ ಬಳಿಕ ಆಸ್ಪತ್ರೆಯಿಂದ ಹೊರಬಂದ್ದಾರೆ. ಆ ದಿನದಂದು 648 ಮಂದಿಗೆ ಹೊಸದಾಗಿ ಸೋಂಕು ತಗಲಿರುವುದು ದೃಢಪಟ್ಟಿರುವ ಪ್ರಕರಣಗಳು ವರದಿಯಾಗಿವೆ ಎಂದು ಅವರು ಹೇಳಿದ್ದಾರೆ.

 ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆಯ 12 ಮಂದಿ ತಜ್ಞರ ತಂಡವೊಂದು ಶನಿವಾರ ಸೋಂಕುರೋಗದ ಉಗಮಸ್ಥಾನವೆನ್ನಲಾದ ವುಹಾನ್‌ನ ಮೀನು ಹಾಗೂ ಕಾಡುಪ್ರಾಣಿಗಳ ಮಾರುಕಟ್ಟೆಗೆ ಭೇಟಿ ನೀಡಿ ವಿಸ್ತೃತವಾದ ಪರಿಶೀಲನೆ ನಡೆಸಿತು.

ಅಮೆರಿಕ, ಜರ್ಮನಿ, ಜಪಾನ್, ನೈಜಿರೀಯ, ರಶ್ಯ,ಸಿಂಗಾಪುರ ಹಾಗೂ ದಕ್ಷಿಣ ಕೊರಿಯದ ತಜ್ಞರಿದ್ದರೆಂದು ಹಾಂಕಾಗ್‌ನಿಂದ ಪ್ರಕಟವಾಗುತ್ತಿರುವ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News