ಕೊರೋನ ವೈರಸ್: ದ. ಕೊರಿಯಾದಲ್ಲಿ ಸಾವಿನ ಸಂಖ್ಯೆ 4ಕ್ಕೆ

Update: 2020-02-23 17:09 GMT

ಶಾಂಘೈ, ಫೆ.23: ಚೀನಾದ ಗಡಿರಾಷ್ಟ್ರವಾದ ದಕ್ಷಿಣ ಕೊರಿಯಾಗೂ ಕೊರೋನ ವೈರಸ್ ದಾಳಿಯಿಟ್ಟಿದ್ದು, ಈ ಮಾರಣಾಂತಿಕ ಸೋಂಕುರೋಗದಿಂದ ಬಾಧಿತರಾದವರ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ. ಕೊರೊನ ವೈರಸ್‌ನ ಕಬಂಧಬಾಹು ಜಗತ್ತಿನ ಇನ್ನೂ ಹಲವು ರಾಷ್ಟ್ರಗಳಿಗೆ ವ್ಯಾಪಿಸುತ್ತಿರುವುದು ವ್ಯಾಪಕ ಕಳವಳಕ್ಕೆ ಕಾರಣವಾಗಿದೆ. ಕೊರೋನ ಪಿಡುಗಿನಿಂದ ತತ್ತರಿಸಿರುವ ಇನ್ನೆರಡು ದೇಶಗಳಾದ ಇಟಲಿ ಹಾಗೂ ಇರಾನ್ ದೇಶಗಳು ಈ ರೋಗದ ಹರಡುವಿಕೆಯನ್ನು ತಡೆಯಲು ತುರ್ತು ಕ್ರಮಗಳನ್ನು ಕೈಗೊಂಡಿವೆ.

ಈ ಮಧ್ಯೆ ಆಫ್ರಿಕ ಖಂಡದ ದೇಶಗಳಿಗೂ ಕೊರೊನೊ ವೈರಸ್‌ನ ಭೀತಿ ಎದುರಾಗಿದೆ. ಅತ್ಯಂತ ಕಳಪೆ ಮಟ್ಟದ ಆರೋಗ್ಯ ವ್ಯವಸ್ಥೆಯಿರುವ ಆ ದೇಶಗಳಲ್ಲಿ ಕೊರೋ ಸೋಂಕಿನ ಹಾವಳಿಗೆ ಸುಲಭವಾಗಿ ತುತ್ತಾಗಬಹುದಾದ ಅಪಾಯವಿದೆಯೆಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

 ಚೀನಾ ಹೊರತುಪಡಿಸಿ ಜಗತ್ತಿನಲ್ಲೇ ಅತ್ಯಧಿಕ ಸಂಖ್ಯೆಯ ಕೊರೋನ ವೈರಸ್ ರೋಗಿಗಳಿರುವ ದಕ್ಷಿಣ ಕೊರಿಯದಲ್ಲಿ ಈ ಸೋಕಿನ 123 ಹೊಸ ಪ್ರಕರಣಗಳು ರವಿವಾರ ವರದಿಯಾಗಿದ್ದು, ಅಲ್ಲಿ ರೋಗಪೀಡಿತರ ಸಂಖ್ಯೆಯ 556ಕ್ಕೇರಿದೆ. ಇಂದು ಇನ್ನಿಬ್ಬರು ಸೋಂಕಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 4ಕ್ಕೇರಿದೆ.

 ಕೊರೋನ ಸೋಂಕಿನಿಂದಾಗಿ ದೇಶದ 5.10 ಕೋಟಿ ಜನತೆ ಅತ್ಯಂತ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆಂದು ದ.ಕೊರಿಯದ ಪ್ರಧಾನಿ ಚುಂಗ್ ಸೈ ಕ್ಯೂನ್ ದೇಶಕ್ಕೆ ನೀಡಿದ ಸಂದೇಶವೊಂದರಲ್ಲಿ ತಿಳಿಸಿದ್ದಾರೆ. ಸುಲಭವಾಗಿ ಸೋಂಕು ರೋಗಕ್ಕೆ ತುತ್ತಾಗುವುದರಿಂದ ಪಾರಾಗಲು ಜನರು ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಬೃಹತ್ ಸಭೆಗಳಲ್ಲಿ ಪಾಲ್ಗೊಳ್ಳದಂತೆ ಚುಂಗ್ ದೇಶದ ಜನತೆಗೆ ಕರೆ ನೀಡಿದ್ದಾರೆ.

ಯುರೋಪ್ ರಾಷ್ಟ್ರವಾದ ಇಟಲಿಯಲ್ಲಿಯೂ ಉತ್ತರ ಭಾಗದ ನಗರಗಳಿಗೆ ಬೀಗಮುದ್ರೆ ಹಾಕಲಾಗಿದ್ದು, ಆಲ್ಲಿಗೆ ಜನರ ಆಗಮನ, ನಿರ್ಗಮನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಶಾಲೆ,ಕಾಲೇಜುಗಳು ಹಾಗೂ ಅಂಗಡಿಗಳನ್ನು ಮುಚ್ಚುಗಡೆಗೊಳಿಸಲಾಗಿದ್ದು, ಜನತೆ ಮನೆಯಲ್ಲಿಯೇ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ.

ಶನಿವಾರ ಇಟಲಿಯ ಲೊಂಬಾರ್ಡಿ ನಗರದಲ್ಲಿ 77 ವರ್ಷ ವಯಸ್ಸಿನ ಮಹಿಳೆಯೊಬ್ಬರು ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟಿರುವುದನ್ನು ಇಟಲಿ ಸರಕಾರ ದೃಢಪಡಿಸಿದೆ. ಇದರೊಂದಿಗೆ ಆ ದೇಶದಲ್ಲಿ ಸೋಂಕುರೋಗದ ಹಾವಳಿಗೆ ಬಲಿಯಾದವರ ಸಂಖ್ಯೆ 4ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News