ಭಾರತದ ಡೇವಿಸ್ ಕಪ್ ತಂಡಕ್ಕೆ ಲಿಯಾಂಡರ್ ಪೇಸ್

Update: 2020-02-25 16:47 GMT

ಹೊಸದಿಲ್ಲಿ, ಫೆ.25: ಕ್ರೊಯೇಶಿಯ ವಿರುದ್ಧ ನಡೆಯಲಿರುವ ಮುಂಬರುವ ಡೇವಿಸ್ ಕಪ್ ಟೆನಿಸ್ ಟೂರ್ನಿಗೆ ಭಾರತದ ಐದು ಮಂದಿ ಸದಸ್ಯರ ತಂಡದಲ್ಲಿ ಖ್ಯಾತ ಆಟಗಾರ ಲಿಯಾಂಡರ್ ಪೇಸ್ ಸ್ಥಾನ ಪಡೆದಿದ್ದಾರೆ. ದಿವಿಜ್ ಶರಣ್ ಅವರು ಮೀಸಲು ಆಟಗಾರರಾಗಿದ್ದಾರೆ.

 ಅಖಿಲ ಭಾರತ ಟೆನಿಸ್ ಒಕ್ಕೂಟ(ಎಐಟಿಎ) ಅಂತಿಮ ತಂಡದ ಪಟ್ಟಿಯನ್ನು ಇಂಟರ್‌ನ್ಯಾಶನಲ್ ಟೆನಿಸ್ ಫೆಡರೇಶನ್‌ಗೆ(ಐಟಿಎಫ್)ಕಳುಹಿಸಿಕೊಟ್ಟಿದೆ.ಅರ್ಹತಾ ಟೂರ್ನಿಗೆ ಮೊದಲು 6 ಮಂದಿ ಆಟಗಾರರನ್ನು ಆಯ್ಕೆ ಮಾಡಲಾಗಿತ್ತು.

ಝಾಗ್ರೇಬ್‌ನಲ್ಲಿ ಮಾರ್ಚ್ 6ರಿಂದ 7ರ ತನಕ ನಡೆಯಲಿರುವ ಟೂರ್ನಿಯಲ್ಲಿ ಕ್ರೊಯೇಶಿಯ ಕ್ವಾಲಿಫೈಯರ್ 24 ತಂಡಗಳಲ್ಲಿ ಅಗ್ರ ತಂಡವಾಗಿದೆ. ಭಾರತ ತಂಡದಲ್ಲಿ ಸುಮಿತ್ ನಾಗಲ್, ಪ್ರಜ್ಞೇಶ್ ಗುಣೇಶ್ವರನ್ ಮತ್ತು ರಾಮಕುಮಾರ್ ರಾಮನಾಥನ್ ಅವರು ಸಿಂಗಲ್ಸ್ ಆಟಗಾರರಾಗಿದ್ದಾರೆ. ಪೇಸ್ ಮತ್ತು ರೋಹನ್ ಬೋಪಣ್ಣ ಡಬಲ್ಸ್ ಆಟಗಾರರಾಗಿದ್ದಾರೆ.

 ಬೋಪಣ್ಣ ಕಳೆದ ಪಾಕಿಸ್ತಾನ ವಿರುದ್ಧ ಡೇವಿಸ್ ಕಪ್ ಪಂದ್ಯದಲ್ಲಿ ಗಾಯದ ಕಾರಣದಿಂದಾಗಿ ಆಡಿರಲಿಲ್ಲ. ಶರಣ್ ವಿವಾಹ ಅತಿಥಿ ಸತ್ಕಾರದಲ್ಲಿ ವ್ಯಸ್ತರಾಗಿದ್ದರು.

ಪೇಸ್ ಮತ್ತು ಜೀವನ್ ನೆಡುಂಚೆಝಿಯಾನ್ ಅವರು ಕಝಖ್‌ಸ್ತಾನದ ನೂರ್ ಸುಲ್ತಾನ್‌ನಲ್ಲಿ ನಡೆದ ಪಂದ್ಯದಲ್ಲಿ ಆಡಿದ್ದರು.

   ‘‘ಪೇಸ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ದಿವಿಜ್ ಅವರನ್ನು ಪುಣೆಯಲ್ಲಿ ನಡೆದ ಟಾಟಾ ಓಪನ್ ಮಹಾರಾಷ್ಟ್ರ ಟೂರ್ನಿಯಲ್ಲಿ ಸೋಲಿಸಿದ್ದರು ಮತ್ತು ಬೆಂಗಳೂರು ಓಪನ್ ಚಾಲೆಂಜರ್‌ನಲ್ಲಿ ಫೈನಲ್ ತಲುಪಿದ್ದರು. ಕಳೆದ 30 ವರ್ಷಗಳಿಂದ ಅವರು ಭಾರತ ತಂಡದ ಪರ ಆಡುತ್ತಿದ್ದಾರೆ’’ ಎಂದು ಆಟವಾಡದ ನಾಯಕ ರಾಜ್‌ಪಾಲ್ ತಿಳಿಸಿದ್ದಾರೆ. ಡೇವಿಸ್ ಕಪ್‌ನಲ್ಲಿ ಎರಡನೇ ಬಾರಿ ಭಾರತ ಮತ್ತು ಕ್ರೊಯೇಶಿಯ ಮುಖಾಮುಖಿಯಾಗಲಿವೆ. ಈ ಮೊದಲು 1995ರಲ್ಲಿ ನಡೆದ ಮುಖಾಮುಖಿಯಲ್ಲಿ ಕ್ರೊಯೇಶಿಯವನ್ನು ಭಾರತ 3-2 ಅಂತರದಲ್ಲಿ ಸೋಲಿಸಿತ್ತು. ಪೇಸ್ ಅವರು ಸಿಂಗಲ್ಸ್ ಮತ್ತು ಡಬಲ್ಸ್ ತಂಡದಲ್ಲಿದ್ದರು. ಅವರ ತಂಡ ವಿಜಯಿಯಾಗಿತ್ತು. ಕ್ರೊಯೇಶಿಯದಲ್ಲಿ ಅಗ್ರ 50ರೊಳಗಿನ ರ್ಯಾಂಕ್‌ನಲ್ಲಿರುವ ಇಬ್ಬರು ಆಟಗಾರರರಿದ್ದಾರೆ. ಅವರೆಂದರೆ ಬೊರ್ನಾ ಕೊರಿಕ್( ನಂ.26) ಮತ್ತು ಮರಿನ್ ಸಿಲಿಕ್(ನಂ.36). 2019ರಲ್ಲಿ ನಡೆದ ಫೈನಲ್ಸ್‌ನಲ್ಲಿ ಸಿಲಿಕ್ ಭಾಗವಹಿಸಲಿಲ್ಲ. ಕ್ರೊಯೇಶಿಯ, ಸ್ಪೇನ್ ಮತ್ತು ರಶ್ಯ ವಿರುದ್ಧದ ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದರು. ಸಿಲಿಕ್ ಅವರನ್ನು ಭಾರತ ವಿರುದ್ಧದ ಪಂದ್ಯದಲ್ಲಿ ಆಡಿಸುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News