ಝಿಂಬಾಬ್ವೆವಿರುದ್ಧ ಬಾಂಗ್ಲಾಕ್ಕೆ ಇನಿಂಗ್ಸ್ ಅಂತರದ ಗೆಲುವು

Update: 2020-02-25 17:05 GMT

ಢಾಕಾ, ಫೆ.25: ಬಾಂಗ್ಲಾದೇಶ ತಂಡ ಝಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 106 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 15 ತಿಂಗಳ ಬಳಿಕ ಐದು ದಿನಗಳ ಪಂದ್ಯದಲ್ಲಿ ಮೊದಲ ಜಯ ದಾಖಲಿಸಿದೆ.

ಮೊದಲ ಇನಿಂಗ್ಸ್‌ನಲ್ಲಿ ಝಿಂಬಾಬ್ವೆ ತಂಡವನ್ನು 265 ರನ್‌ಗೆ ನಿಯಂತ್ರಿಸಿದ ಬಾಂಗ್ಲಾದೇಶ ತನ್ನ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 560 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ಇದರೊಂದಿಗೆ ಬಾಂಗ್ಲಾ 295 ರನ್ ಇನಿಂಗ್ಸ್ ಮುನ್ನಡೆ ಸಾಧಿಸಿತು.

 ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಝಿಂಬಾಬ್ವೆ ನಾಲ್ಕನೇ ದಿನವಾದ ಮಂಗಳವಾರ 57.3 ಓವರ್‌ಗಳಲ್ಲಿ 189 ರನ್‌ಗಳಿಗೆ ಆಲೌಟಾಗಿ ಇನಿಂಗ್ಸ್ ಸೋಲು ಕಂಡಿತು. ಸ್ಪಿನ್ನರ್‌ಗಳಾದ ನಯೀಮ್ ಹಸನ್(5-82) ಹಾಗೂ ತೈಜುಲ್ ಇಸ್ಲಾಂ(4-78)ಒಂಭತ್ತು ವಿಕೆಟ್‌ಗಳನ್ನು ಕಬಳಿಸಿ ಝಿಂಬಾಬ್ವೆಗೆ ಸವಾಲಾದರು. ಮೊಮಿನುಲ್ ಹಕ್ ಟೆಸ್ಟ್ ನಾಯಕನಾಗಿ ಮೊದಲ ಗೆಲುವು ಸಾಧಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ಔಟಾಗದೆ 203 ರನ್(318 ಎಸೆತ, 28 ಬೌಂಡರಿ) ಗಳಿಸಿ ತಂಡವು ಬೃಹತ್ ಮೊತ್ತ ಗಳಿಸಲು ನೆರವಾಗಿದ್ದ ಮುಶ್ಫಿಕುರ್ರಹೀಂ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಪಂದ್ಯದಲ್ಲಿ ಒಟ್ಟು 9 ವಿಕೆಟ್‌ಗಳನ್ನು ಉರುಳಿಸಿದ ಆಫ್-ಸ್ಪಿನ್ನರ್ ನಯೀಮ್ ಗಮನಾರ್ಹ ಪ್ರದರ್ಶನ ನೀಡಿದರು.

ಝಿಂಬಾಬ್ವೆ ನಾಯಕ ಕ್ರೆಗ್ ಎರ್ವಿನ್ ಮೊದಲ ಇನಿಂಗ್ಸ್ ನಲ್ಲಿ ಶತಕ (107)ಸಿಡಿಸಿದರೂ ಸಹ ಆಟಗಾರರು ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿಸಲು ವಿಫಲರಾಗಿ ನಿರಾಸೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News