ದುಬೈನಲ್ಲಿ ಏಶ್ಯಕಪ್: ಸೌರವ್ ಗಂಗುಲಿ

Update: 2020-02-28 17:46 GMT

ಕೋಲ್ಕತಾ, ಫೆ.28: ಕಾಂಟಿನೆಂಟಲ್ ಟೂರ್ನಮೆಂಟ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಉಭಯ ತಂಡಗಳು ಭಾಗವಹಿಸಲು ಅನುವು ಮಾಡಿಕೊಡಲು ಮುಂಬರುವ ಏಶ್ಯಕಪ್ ದುಬೈನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಹೇಳಿದ್ದಾರೆ. ಸೆಪ್ಟಂಬರ್‌ನಲ್ಲಿ ನಿಗದಿಯಾಗಿರುವ ಏಶ್ಯಕಪ್‌ನ್ನು ಪಾಕ್ ಆಯೋಜಿಸಬೇಕಾಗಿತ್ತು. ಆದರೆ, ಭದ್ರತಾ ಭೀತಿಯಿಂದಾಗಿ ಭಾರತೀಯ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. ಇದೀಗ ಏಶ್ಯಕಪ್ ದುಬೈಗೆ ಸ್ಥಳಾಂತರವಾಗಿದೆ.‘‘ಏಶ್ಯಕಪ್ ದುಬೈನಲ್ಲಿ ನಡೆಯಲಿದ್ದು, ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಭಾಗವಹಿಸಲಿವೆ’’ ಎಂದು ಮಾ.3ರಂದು ನಡೆಯಲಿರುವ ಏಶ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಲು ದುಬೈಗೆ ತೆರಳುವ ಮೊದಲು ಸುದ್ದಿಗಾರರಿಗೆ ಗಂಗುಲಿ ತಿಳಿಸಿದರು.

ಪಾಕಿಸ್ತಾನ ತಟಸ್ಥ ತಾಣದಲ್ಲಿ ಏಶ್ಯಕಪ್‌ನಲ್ಲಿ ಆಡಿದರೆ ಅದರೊಂದಿಗೆ ಆಡಲು ತನಗೇನು ಅಭ್ಯಂತರ ಇಲ್ಲ ಎಂದು ಬಿಸಿಸಿಐ ಈ ಮೊದಲು ಸ್ಪಷ್ಟಪಡಿಸಿತ್ತು. ಭಾರತ-ಪಾಕ್ ಕ್ರಿಕೆಟ್ ತಂಡಗಳು 2012-13ರಿಂದ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ. ಉಭಯ ದೇಶಗಳ ನಡುವೆ ರಾಜಕೀಯ ಸಂಘರ್ಷ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನ 2013ರಿಂದ ಐಸಿಸಿ ಆಯೋಜಿಸುವ ಪ್ರಮುಖ ಟೂರ್ನಿಗಳಲ್ಲಿ ಮಾತ್ರ ಆಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News