×
Ad

ಶೆಫಾಲಿ ವರ್ಮಾ ವಿಶ್ವದ ನಂ.1 ಆಟಗಾರ್ತಿ

Update: 2020-03-04 23:24 IST

ಸಿಡ್ನಿ,ಮಾ.4: ಭಾರತದ ಯುವ ಆಟಗಾರ್ತಿ ಶೆಫಾಲಿ ವರ್ಮಾ ಬುಧವಾರ ಬಿಡುಗಡೆಯಾಗಿರುವ ಮಹಿಳಾ ಐಸಿಸಿ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಬ್ಯಾಟ್ಸ್ ವುಮೆನ್ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಈಗ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಶೆಫಾಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ.

 16ರ ಹರೆಯದ ಶೆಫಾಲಿ ನ್ಯೂಝಿಲ್ಯಾಂಡ್‌ನ ಸುಝಿ ಬೇಟ್ಸ್‌ರಿಂದ ನಂ.1 ಸ್ಥಾನ ಕಸಿದುಕೊಂಡರು. 2018ರ ಅಕ್ಟೋಬರ್‌ನಿಂದ ಸುಝಿ ನಂ.1 ಸ್ಥಾನ ಕಾಯ್ದುಕೊಂಡಿದ್ದರು. ವೆಸ್ಟ್‌ಇಂಡೀಸ್ ನಾಯಕಿ ಸ್ಟಫಾನಿ ಟೇಲರ್‌ರಿಂದ ಸುಝಿ ಅಗ್ರಸ್ಥಾನ ಪಡೆದುಕೊಂಡಿದ್ದರು.

ಸ್ಮತಿ ಮಂಧಾನ 6ನೇ ಸ್ಥಾನಕ್ಕೆ ಜಾರಿದ್ದಾರೆ. ಶೆಫಾಲಿ ವರ್ಮಾ ಹಾಗೂ ಇಂಗ್ಲೆಂಡ್‌ನ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಕ್ರಮವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಗ್ರಸ್ಥಾನದೊಂದಿಗೆ ಗುರುವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಭಾರತ-ಇಂಗ್ಲೆಂಡ್ ಸೆಮಿ ಫೈನಲ್‌ನಲ್ಲಿ ಸೆಣಸಾಡಲಿವೆ.

 ಅಗ್ರ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿರುವ ಶೆಫಾಲಿ 4 ಇನಿಂಗ್ಸ್‌ಗಳಲ್ಲಿ ಒಟ್ಟು 161 ರನ್ ಗಳಿಸಿದ್ದಾರೆ. ಇದರಲ್ಲಿ ಶ್ರೀಲಂಕಾ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ ಗಳಿಸಿರುವ 47 ಹಾಗೂ 46 ರನ್ ಕೂಡ ಸೇರಿವೆ. ವಿಶ್ವಕಪ್‌ನಲ್ಲಿನ ಉತ್ತಮ ಪ್ರದರ್ಶನದ ಸಹಾಯದಿಂದ ಶೆಫಾಲಿ ಅವರು ಮಿಥಾಲಿ ರಾಜ್ ಬಳಿಕ ಟ್ವೆಂಟಿ-20 ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿರುವ ಭಾರತದ ಎರಡನೇ ಬ್ಯಾಟ್ಸ್‌ವುಮೆನ್ ಆಗಿದ್ದಾರೆ.

ಇಂಗ್ಲೆಂಡ್‌ನ ಸೋಫಿ 4 ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಉರುಳಿಸಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಶ್ರೇಷ್ಠ ಬೌಲಿಂಗ್(3-7)ಮಾಡಿದ್ದರು.ಎಪ್ರಿಲ್ 2016ರ ಬಳಿಕ ನಂ.1 ಸ್ಥಾನಕ್ಕೇರಿದ ಇಂಗ್ಲೆಂಡ್‌ನ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. 2015ರ ಬಳಿಕ ಈ ಸಾಧನೆ ಮಾಡಿದ ಇಂಗ್ಲೆಂಡ್‌ನ ಮೊದಲ ಸ್ಪಿನ್ನರ್ ಆಗಿದ್ದಾರೆ.

 ಭಾರತೀಯ ಬೌಲರ್‌ಗಳ ಪೈಕಿ ಪೂನಂ ಯಾದವ್ ನಾಲ್ಕು ಸ್ಥಾನ ಭಡ್ತಿ ಪಡೆದು 8ನೇ ಸ್ಥಾನಕ್ಕೇರಿದ್ದಾರೆ. ವಿಶ್ವಕಪ್‌ನಲ್ಲಿ ಪೂನಂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಶ್ರೀಲಂಕಾದ ನಾಯಕಿ ಚಾಮರಿ ಅಥಪಟ್ಟು ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ 18ರಿಂದ 14ನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್‌ನ ಸಿವೆರ್ ಮತ್ತೊಮ್ಮೆ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ. ನಾಯಕಿ ಹೀದರ್ ನೈಟ್ ಅಗ್ರ-15ರಲ್ಲಿದ್ದಾರೆ.

 ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ನ್ಯೂಝಿಲ್ಯಾಂಡ್ ನಾಯಕಿ ಸೋಫಿ ಡಿವೈನ್ ನಂ.1 ಸ್ಥಾನದಲ್ಲಿದ್ದಾರೆ. ಭಾರತದ ದೀಪ್ತಿ ಶರ್ಮಾ 9 ಸ್ಥಾನ ಭಡ್ತಿ ಪಡೆದು ಏಳನೇ ಸ್ಥಾನಕ್ಕೇರಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮೊದಲ ಬಾರಿ ಏಳು ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.

ಟ್ವೆಂಟಿ-20 ಟೀಮ್ ರ್ಯಾಂಕಿಂಗ್‌ನಲ್ಲಿ 290 ಅಂಕ ಗಳಿಸಿರುವ ಆಸ್ಟ್ರೇಲಿಯ ಅಗ್ರಸ್ಥಾನದಲ್ಲಿ ಮುಂದುವರಿದಿದೆ. 278 ಅಂಕ ಗಳಿಸಿರುವ ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿದೆ.

/********************************/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News