ಐಪಿಎಲ್‌ನ ಎಲ್ಲ ಬಹುಮಾನ ಮೊತ್ತದಲ್ಲಿ ಕಡಿತ

Update: 2020-03-04 17:57 GMT

ಮುಂಬೈ, ಮಾ.4: ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐಗೂ ಕೂಡ ಆರ್ಥಿಕ ಹಿಂಜರಿತದ ಬಿಸಿ ತಟ್ಟಿದಂತೆ ಕಾಣುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಆರಂಭವಾದ ನಂತರ ಹಣದ ಹೊಳೆಯಲ್ಲಿ ಮಿಂದೆದಿದ್ದ ಬಿಸಿಸಿಐ ಈ ವರ್ಷ ಬಹುಮಾನ ಮೊತ್ತದಲ್ಲಿ ಕಡಿತ ಮಾಡುವ ನಿಟ್ಟಿನಲ್ಲಿ ಚಿಂತಿಸುತ್ತಿದೆ.

ಚಾಂಪಿಯನ್, ರನ್ನರ್ಸ್ ಅಪ್ ಹಾಗೂ ಪ್ಲೇ-ಆಫ್ ಕಾಲ್ವಿಫೈಯರ್ ಸುತ್ತಿನ ಬಹುಮಾನ ಮೊತ್ತದಲ್ಲಿ ಕಡ್ಡಾಯವಾಗಿ ಕಡಿತ ಮಾಡುವ ನಿರ್ಧಾರಕ್ಕೆ ಬಂದಿದೆ.

8 ಫ್ರಾಂಚೈಸಿಗಳು ಸೇರಿದಂತೆ ಐಪಿಎಲ್‌ನ ಎಲ್ಲ ಭಾಗೀದಾರರಿಗೆ ಸುತ್ತೋಲೆಯನ್ನು ಕಳುಹಿಸಲಾಗಿದ್ದು, ಈ ಬಾರಿಯ ಐಪಿಎಲ್‌ನಲ್ಲಿ ಉದ್ಘಾಟನಾ ಸಮಾರಂಭ ನಡೆಸಲಾಗುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಈ ವರ್ಷ ಪ್ಲೇ-ಆಫ್ ಪಂದ್ಯಗಳ ಬಹುಮಾನ ಮೊತ್ತವನ್ನು ಅರ್ಧ ಕಡಿತಗೊಳಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

2020ರ ಪ್ಲೇ-ಆಫ್ ಬಹುಮಾನ ಮೊತ್ತದಲ್ಲಿ ಶೇ.50ರಷ್ಟು ಕಡಿತಗೊಳಿಸಲು ಬಿಸಿಸಿಐ ಪ್ರಸ್ತಾವ ಸಲ್ಲಿಸಿದೆ. ಈ ನಿರ್ಧಾರ ಫ್ರಾಂಚೈಸಿಗಳಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. 2020ರ ಐಪಿಎಲ್‌ನಲ್ಲಿ ವಿಜೇತ ತಂಡ 10 ಕೋ.ರೂ., ರನ್ನರ್‌ಅಪ್(ಫೈನಲ್‌ನಲ್ಲಿ ಪರಾಜಿತ ತಂಡ)6.5 ಕೋ.ರೂ., ಮೂರನೇ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಗಳು(ಕ್ವಾಲಿಫೈಯರ್-2 ಪ್ಲೇ ಆಫ್ ಪಂದ್ಯ ಹಾಗೂ ಎಲಿಮಿನೇಟರ್ ಪ್ಲೇ-ಆಫ್ ಪಂದ್ಯದಲ್ಲಿ ಸೋತ ತಂಡಗಳು)ತಲಾ 4.375 ಕೋಟಿ ರೂ. ಬಹುಮಾನ ಪಡೆಯಲಿವೆ ಎಂದು ಬಿಸಿಸಿಐ ಕಳುಹಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.

  2019ರ ಆವೃತ್ತಿಯ ಐಪಿಎಲ್‌ನಲ್ಲಿ ಪ್ರಶಸ್ತಿ ವಿಜೇತ ತಂಡ 20 ಕೋ.ರೂ. ಬಹುಮಾನ ಮೊತ್ತ ಗೆದ್ದುಕೊಂಡಿತ್ತು. ರನ್ನರ್‌ಅಪ್ ತಂಡ 12.5 ಕೋ.ರೂ., ಮೂರನೇ ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಗಳು ತಲಾ 8.75 ಕೋ.ರೂ. ಬಹುಮಾನ ಪಡೆದಿದ್ದವು. ಖರ್ಚು ಕಡಿಮೆ ಮಾಡುವ ಮಾನದಂಡವಾಗಿ ಈ ಬಾರಿ ಬಹುಮಾನ ಮೊತ್ತವನ್ನು ಕಳೆದ ಬಾರಿಗಿಂತ ಅರ್ಧ ಕಡಿಮೆ ಮಾಡಲು ಬಿಸಿಸಿಐ ನಿರ್ಧರಿಸಿದೆ.

ಈ ಬೆಳವಣಿಗೆಯು ನಮಗೆ ಖುಷಿ ತಂದಿಲ್ಲ ಎಂದು ನಾಲ್ಕು ಫ್ರಾಂಚೈಸಿಗಳು ಹೇಳಿವೆ. ಸಂಬಂಧಿತ ಅಧಿಕಾರಿಗಳ ಬಳಿ ಈ ಕುರಿತು ನಾವು ಚರ್ಚೆ ನಡೆಸುತ್ತೇವೆ ಎಂದು ಇನ್ನೆರಡು ಫ್ರಾಂಚೈಸಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News