×
Ad

500ನೇ ಟ್ವೆಂಟಿ-20 ಪಂದ್ಯದಲ್ಲಿ 10,000 ರನ್ ಕ್ಲಬ್‌ಗೆ ಪೊಲಾರ್ಡ್

Update: 2020-03-06 18:13 IST

ಕ್ಯಾಂಡಿ, ಮಾ.5: ವೆಸ್ಟ್‌ಇಂಡೀಸ್ ಆಲ್‌ರೌಂಡರ್ ಕಿರೊನ್ ಪೊಲಾರ್ಡ್ 500 ಟ್ವೆಂಟಿ-20 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಹಾಗೂ ಇದೇ ಮಾದರಿ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಎರಡನೇ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಶ್ರೀಲಂಕಾ ವಿರುದ್ಧ ಬುಧವಾರ 25 ರನ್‌ಗಳ ಅಂತರದಿಂದ ಗೆದ್ದ ಪಂದ್ಯದಲ್ಲಿ ಪೊಲಾರ್ಡ್ ಈ ಅವಳಿ ಸಾಧನೆ ಮಾಡಿದ್ದಾರೆ.

ವಿಂಡೀಸ್ ನಾಯಕ ಪೊಲಾರ್ಡ್ ಅಂತರ್‌ರಾಷ್ಟ್ರೀಯ ಹಾಗೂ ಫ್ರಾಂಚೈಸಿ ಆಧರಿತ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಲಂಕಾ ವಿರುದ್ಧ ಪಂದ್ಯವನ್ನಾಡುವ ಮೊದಲು 9,966 ರನ್ ಗಳಿಸಿದ್ದರು. ಲಂಕಾ ವಿರುದ್ಧ ಮೊದಲ ಪಂದ್ಯದಲ್ಲಿ 15 ಎಸೆತಗಳಲ್ಲಿ 34 ರನ್ ಗಳಿಸಿದ ಪೊಲಾರ್ಡ್ 10,000 ರನ್ ಕ್ಲಬ್‌ಗೆ ಸೇರಿದರು. ಈ ಮೂಲಕ ಸಹ ಆಟಗಾರ ಕ್ರಿಸ್ ಗೇಲ್(13,296)ಬಳಿಕ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

2006ರಲ್ಲಿ ಟ್ವೆಂಟಿ-20 ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದ 32ರ ಹರೆಯದ ಪೊಲಾರ್ಡ್ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲದೆ ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್, ವೆಸ್ಟ್‌ಇಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಟ್ವೆಂಟಿ-20 ಫ್ರಾಂಚೈಸಿಗಳಲ್ಲಿ ಆಡಿದ್ದಾರೆ.

 ‘‘500ಕ್ಕೆ ಅಭಿನಂದನೆಗಳು ಹಾಗೂ 10 ಸಾವಿರ ಕ್ಲಬ್‌ಗೆ ಸ್ವಾಗತ’’ ಎಂದು ಗೇಲ್ ಅವರು ಪೊಲಾರ್ಡ್‌ರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದರು.

ವೆಸ್ಟ್‌ಇಂಡೀಸ್ ತಂಡ ಬುಧವಾರ ರಾತ್ರಿ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 196 ರನ್ ಗಳಿಸಿತ್ತು. ಗೆಲ್ಲಲು ಕಠಿಣ ಗುರಿ ಪಡೆದಿದ್ದ ಶ್ರೀಲಂಕಾ 171 ರನ್‌ಗೆ ಆಲೌಟಾಗಿತ್ತು. ವೇಗದ ಬೌಲರ್ ಒಶಾನೆ ಥಾಮಸ್ ಐದು ವಿಕೆಟ್ ಗೊಂಚಲು ಪಡೆದು ಆತಿಥೇಯರಿಗೆ ಕಡಿವಾಣ ಹಾಕಿದರು. ಮಾತ್ರವಲ್ಲ ವಿಂಡೀಸ್‌ಗೆ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಒದಗಿಸಿಕೊಡುವಲ್ಲಿ ಶ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News