ಸಿಂಧು, ಸೈನಾಗೆ ಕಠಿಣ ಎದುರಾಳಿ

Update: 2020-03-06 12:44 GMT

ಹೊಸದಿಲ್ಲಿ,ಮಾ.5: ಮುಂಬರುವ ಯೊನೆಕ್ಸ್ ಇಂಡಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್‌ಗಳಾದ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್ ಕಠಿಣ ಸವಾಲು ಎದುರಿಸಲಿದ್ದಾರೆ. ಭಾರತದಲ್ಲೂ 29 ಮಂದಿ ಶಂಕಿತ ಕೊರೋನ ವೈರಸ್ ಬಾಧಿತರಾಗಿರುವ ಕಾರಣ ಟೂರ್ನಿಯ ಮೇಲೆ ಕರಿನೆರಳು ಬಿದ್ದಿದೆ.

 ಮಾ.24ರಿಂದ ಆರಂಭವಾಗಲಿರುವ ವರ್ಲ್ಡ್ ಟೂರ್ ಸೂಪರ್ 500 ಟೂರ್ನಮೆಂಟ್‌ನಲ್ಲಿ 2017ರ ಚಾಂಪಿಯನ್ ಸಿಂಧು ಹಾಂಕಾಂಗ್‌ನ ಚೆವುಂಗ್ ಗಾನ್ ಯಿ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಕೆನಡಾದ ಏಳನೇ ಶ್ರೇಯಾಂಕದ ಮಿಚೆಲ್ ಲಿ ಅವರನ್ನು ಎದುರಿಸುವ ನಿರೀಕ್ಷೆಯಿದೆ.

2015ರಲ್ಲಿ ಇಂಡಿಯಾ ಓಪನ್ ಚಾಂಪಿಯನ್ ಆಗಿದ್ದ ಸೈನಾ ಮೊದಲ ಸುತ್ತಿನಲ್ಲಿ ಚೈನೀಸ್ ತೈಪೆಯ ಪೈ ಯು ಪೊ ಅವರನ್ನು ಎದುರಿಸಲಿದ್ದಾರೆ. ಎರಡನೇ ಸುತ್ತಿನಲ್ಲಿ 8ನೇ ಶ್ರೇಯಾಂಕದ ಕೊರಿಯಾದ ಸಂಗ್ ಜಿ ಹ್ಯೂನ್ ಸವಾಲು ಎದುರಿಸುವ ಸಾಧ್ಯತೆಯಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಐದನೇ ಶ್ರೇಯಾಂಕದ ಕಿಡಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಕ್ವಾಲಿಫೈಯರ್ ವಿರುದ್ಧ ಆಡಲಿದ್ದು, ಸಹ ಆಟಗಾರ ಲಕ್ಷ ಸೇನ್‌ರನ್ನು ಎದುರಿಸುವ ನಿರೀಕ್ಷೆಯಿದೆ. ಒಲಿಂಪಿಕ್ ಗೇಮ್ಸ್‌ನಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿರುವ ಮೂರನೇ ಶ್ರೇಯಾಂಕದ ಬಿ.ಸಾಯಿ ಪ್ರಣೀತ್ ಮೊದಲ ರೌಂಡ್‌ನಲ್ಲಿ ಭಾರತದ ಎಚ್.ಎಸ್.ಪ್ರಣಯ್‌ರನ್ನು ಎದುರಿಸಲಿದ್ದಾರೆ.

ಸಮೀರ್ ವರ್ಮಾ, ಸೌರಭ್ ವರ್ಮಾ ಹಾಗೂ ಪಿ.ಕಶ್ಯಪ್ ಮೊದಲ ಸುತ್ತಿನಲ್ಲಿ ಕ್ರಮವಾಗಿ ಥಾಯ್ಲೆಂಡ್‌ನ ಸಿಥಿಕೊಮ್ ಥಮ್ಮಸಿನ್, ತೈಪೆಯ ಏಳನೇ ಶ್ರೇಯಾಂಕದ ವಾಂಗ್ ಝು ವೀ ಹಾಗೂ ಥಾಯ್ಲೆಂಡ್‌ನ ಖೊಸಿಟ್ ಫೆಟ್‌ಪ್ರದಾಬ್ ಸವಾಲು ಎದುರಿಸಲಿದ್ದಾರೆ.

ಏಳನೇ ಶ್ರೇಯಾಂಕದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಮೊದಲ ಸುತ್ತಿನಲ್ಲಿ ಜಪಾನ್‌ನ ಟಕುರೊ ಹೊಕಿ ಹಾಗೂ ಯುಗೊ ಕೊಬಯಶಿ ಅವರನ್ನು ಮುಖಾಮುಖಿಯಾಗಲಿದ್ದಾರೆ. ಭಾರತದಲ್ಲಿ ಕೊರೋನ ವೈರಸ್ ಪೀಡಿತರ ಸಂಖ್ಯೆ 29ಕ್ಕೇರಿದ ಹಿನ್ನೆಲೆಯಲ್ಲಿ ಟೂರ್ನಮೆಂಟ್ ನಡೆಯುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News