ಭಾರತ ಮಹಿಳಾ ತಂಡಕ್ಕೆ ಕೊಹ್ಲಿ ಅಭಿನಂದನೆ
Update: 2020-03-06 18:19 IST
ಹೊಸದಿಲ್ಲಿ, ಮಾ.5: ಇದೇ ಮೊದಲ ಬಾರಿ ವನಿತೆಯರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿರುವ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಕ್ರಿಕೆಟ್ ತಂಡಕ್ಕೆ ಭಾರತ ಪುರುಷರ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿನಂದಿಸಿದ್ದಾರೆ.
‘‘ಟ್ವೆಂಟಿ-20 ವಿಶ್ವಕಪ್ ಫೈನಲ್‌ಗೆ ಅರ್ಹತೆ ಪಡೆದಿರುವ ಭಾರತ ಮಹಿಳಾ ತಂಡಕ್ಕೆ ಅಭಿನಂದನೆಗಳು. ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ. ಫೈನಲ್ ಪಂದ್ಯಕ್ಕಾಗಿ ನಿಮಗೆಲ್ಲರಿಗೂ ಶುಭ ಹಾರೈಸುವೆ’’ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ರವಿವಾರ ಮೆಲ್ಬೋರ್ನ್‌ನಲ್ಲಿ ಫೈನಲ್ ಪಂದ್ಯ ಆಡಲಿರುವ ಭಾರತೀಯ ಮಹಿಳಾ ತಂಡಕ್ಕೆ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಅಭಿನಂದಿಸಿದರು. ಟೂರ್ನಮೆಂಟ್‌ನಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿರುವ ಭಾರತ ಮಹಿಳಾ ತಂಡವನ್ನು ವಿವಿಎಸ್ ಲಕ್ಷ್ಮಣ್ ಶ್ಲಾಘಿಸಿದರು.