55 ಎಸೆತಗಳಲ್ಲಿ 158 ರನ್: ಟಿ20ಯಲ್ಲಿ ಮತ್ತೊಮ್ಮೆ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ
ನವಿ ಮುಂಬೈ, ಮಾ.6: ಡಿ.ವೈ. ಪಾಟೀಲ್ ಟ್ವೆಂಟಿ-20 ಕಪ್‌ನಲ್ಲಿ ಶುಕ್ರವಾರ ನಡೆದ ಬಿಪಿಸಿಎಲ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಮತ್ತೆ ಫಿಟ್ನೆಸ್ ಪಡೆದಿರುವ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೇವಲ 55 ಎಸೆತಗಳಲ್ಲಿ ಔಟಾಗದೆ 158 ರನ್ ಗಳಿಸಿ ಅಬ್ಬರಿಸಿದ್ದಾರೆ.
ಬೆನ್ನು ಶಸ್ತ್ರಚಿಕಿತ್ಸೆಯ ಬಳಿಕ ಡಿವೈ ಪಾಟೀಲ್ ಟಿ-20 ಕಪ್‌ನಲ್ಲಿ ಆಡುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗಿರುವ ಪಾಂಡ್ಯ 55 ಎಸೆತಗಳಲ್ಲಿ ಆರು ಬೌಂಡರಿ ಹಾಗೂ 20 ಸಿಕ್ಸರ್‌ಗಳ ಸಹಿತ ಔಟಾಗದೆ 158 ರನ್ ಸಿಡಿಸಿ ರಿಲಯನ್ಸ್ ಒನ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 238 ರನ್ ಕಲೆ ಹಾಕಲು ನೆರವಾದರು.
ಘನ್ಸೋಲಿಯ ಆರ್‌ಸಿಪಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದಿದ್ದ ಟ್ವೆಂಟಿ-20 ಕಪ್‌ನ ಲೀಗ್ ಹಂತದ ಪಂದ್ಯದಲ್ಲಿ ರಿಲಯನ್ಸ್ ಒನ್ ಪರವಾಗಿ ಪಾಂಡ್ಯ ಕೇವಲ 39 ಎಸೆತಗಳಲ್ಲಿ 105 ರನ್ ಗಳಿಸಿದ್ದರು.
ಶುಕ್ರವಾರ ಭರ್ಜರಿ ಫಾರ್ಮ್ ಪ್ರದರ್ಶಿಸಿದ ಪಾಂಡ್ಯ ಬಿಪಿಸಿಎಲ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಪಂದ್ಯಕ್ಕೆ ವಾಪಸಾಗಲು ಸಜ್ಜಾಗುತ್ತಿದ್ದಾರೆ.
ಹಾರ್ದಿಕ್ ಅಬ್ಬರದ ಬ್ಯಾಟಿಂಗ್‌ಗೆ ಬಿಪಿಸಿಎಲ್ ಬೌಲರ್‌ಗಳಾದ ಸಂದೀಪ್ ಶರ್ಮಾ(0-37), ಸಿಲ್‌ವೆಸ್ಟರ್ ಡಿ’ಸೋಜಾ(1-56),ಭಾರತದ ಆಲ್‌ರೌಂಡರ್ ಶಿವಂ ದುಬೆ(1-40),ಪರೀಕ್ಷಿತ್(0-28), ಸಾಗರ್ ಉದೇಶಿ(0-45) ಹಾಗೂ ರಾಹುಲ್ ತ್ರಿಪಾಠಿ(2-32) ಚೆನ್ನಾಗಿ ದಂಡಿಸಲ್ಪಟ್ಟರು.
ಗಾಯದಿಂದ ಚೇತರಿಸಿಕೊಳ್ಳುವ ಹಾದಿಯಲ್ಲಿರುವ ಶಿಖರ್ ಧವನ್ ರಿಲಯನ್ಸ್ ಒನ್ ತಂಡದ ಪರ ಕೇವಲ 3 ರನ್ ಗಳಿಸಿ ನಿರಾಸೆಗೊಳಿಸಿದರು.
ರಿಲಯನ್ಸ್ ಒನ್ ತಂಡದ ಬೃಹತ್ ಮೊತ್ತಕ್ಕೆ ಉತ್ತರವಾಗಿ ಬಿಪಿಸಿಎಲ್ 134 ರನ್‌ಗೆ ಆಲೌಟಾಯಿತು. ರಿಲಯನ್ಸ್ 104 ರನ್‌ಗಳ ಅಂತರದ ಭರ್ಜರಿ ಜಯ ದಾಖಲಿಸಿತು. ಬೌಲಿಂಗ್‌ನಲ್ಲೂ ಮಿಂಚಿದ ಹಾರ್ದಿಕ್ ಒಂದು ಓವರ್‌ನಲ್ಲಿ ಕೇವಲ 6 ರನ್ ನೀಡಿ ಒಂದು ವಿಕೆಟ್ ಪಡೆದರು. ಭಾರತದ ವೇಗದ ಬೌಲರ್ ಭುವನೇಶ್ವರ ಕುಮಾರ್ ರಿಲಯನ್ಸ್ ಪರ ವಿಕೆಟ್ ಪಡೆದರು.