×
Ad

ಒಲಿಂಪಿಕ್ಸ್ ಜ್ಯೋತಿ ಬೆಳಗುವ ಕಾರ್ಯಕ್ರಮಕ್ಕೆ ಜಪಾನ್ ಮಕ್ಕಳಿಗೆ ನಿರ್ಬಂಧ

Update: 2020-03-06 23:16 IST

ಟೋಕಿಯೊ, ಮಾ.6: ಗ್ರೀಸ್‌ನಲ್ಲಿ ನಡೆಯುವ ಒಲಿಂಪಿಕ್ಸ್ ಜ್ಯೋತಿ ಹಸ್ತಾಂತರ ಕಾರ್ಯಕ್ರಮ ಹಾಗೂ ಜಪಾನ್‌ನಲ್ಲಿ ನಡೆಯುವ ಜ್ಯೋತಿ ಆಗಮನದ ಕಾರ್ಯಕ್ರಮದಲ್ಲಿ ಸುಮಾರು 340 ಜಪಾನ್ ಪುಟಾಣಿಗಳಿಗೆ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಕೊರೋನ ವೈರಸ್ ಹರಡುವುದರ ವಿರುದ್ಧ ಮುನ್ನಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆಎಂದು ಟೋಕಿಯೊ ಗೇಮ್ಸ್ ಸಂಘಟನಾ ಸಮಿತಿಯ ಅಧ್ಯಕ್ಷ ಯೊಶಿರೊ ಮೊರಿ ಶುಕ್ರವಾರ ತಿಳಿಸಿದ್ದಾರೆ.

ಕೊರೋನ ವೈರಸ್ ಕಾರಣದಿಂದಾಗಿ ಗೇಮ್ಸ್ ರದ್ದಾಗಲಿದೆ ಎಂಬ ಊಹಾಪೋಹವನ್ನು ಯೊಶಿರೊ ಅಲ್ಲಗಳೆದರು.

‘‘ಒಲಿಂಪಿಕ್ಸ್ ರದ್ದಾಗುವುದಕ್ಕೆ ಸಾಧ್ಯವೇ ಇಲ್ಲ’’ ಎಂದು ಗೇಮ್ಸ್ ರದ್ದು ಸಾಧ್ಯತೆಯ ಕುರಿತ ಪ್ರಶ್ನೆಗೆ ಯೊಶಿರೊ ಸ್ಪಷ್ಟಪಡಿಸಿದರು.

ವೇಳಾಪಟ್ಟಿಯಂತೆ ಗೇಮ್ಸ್‌ನ್ನು ಆಯೋಜಿಸುವುದು ನಮ್ಮ ಮುಂದಿರುವ ಏಕೈಕ ಯೋಜನೆಯಾಗಿದೆ. ಆಯೋಜಕರು ವಿವಿಧ ರೀತಿಯ ಅಭಿಪ್ರಾಯವನ್ನು ಆಲಿಸಲು ಒತ್ತು ನೀಡಲಿದ್ದಾರೆ. ಪರಿಸ್ಥಿತಿ ಕ್ಷಿಪ್ರವಾಗಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಟೂರ್ನಿಯಲ್ಲಿ ಹೊಂದಿಕೊಳ್ಳಬೇಕಾಗಿದೆ ಎಂದರು.

ಮಾ.12ರಂದು ಒಲಿಂಪಿಯಾದಲ್ಲಿ ಒಲಿಂಪಿಕ್ಸ್ ಜ್ಯೋತಿ ಬೆಳಗುವ ಕಾರ್ಯಕ್ರಮವಿದೆ. ಏಳು ದಿನಗಳ ರಿಲೇ ಮಾ.19ರಂದು ಗ್ರೀಸ್‌ನಲ್ಲಿ ಒಲಿಂಪಿಕ್ಸ್ ಜ್ಯೋತಿ ಹಸ್ತಾಂತರಿಸುವ ಮೂಲಕ ತೆರೆ ಬೀಳಲಿದೆ. ಈ ಕಾರ್ಯಕ್ರಮದಲ್ಲಿ ಜಪಾನ್‌ನ 140 ಮಕ್ಕಳು ಭಾಗವಹಿಸುವವರಿದ್ದರು. ಸುಮಾರು 200 ಮಕ್ಕಳು ಮಾ.20ರಂದು ಜಪಾನ್‌ಗೆ ಕ್ರೀಡಾಜ್ಯೋತಿ ಆಗಮಿಸುವ ವೇಳೆಗೆ ಉಪಸ್ಥಿತರಿರಬೇಕಾಗಿತ್ತು.

‘‘ಸಮಾರಂಭಗಳಿಗಾಗಿ ಮಕ್ಕಳು ಕಠಿಣ ತಾಲೀಮು ನಡೆಸಿದ್ದರು. ನಾವು ಅವರಲ್ಲಿ ಕ್ಷಮೆಕೋರುತ್ತೇವೆ. ಗೇಮ್ಸ್‌ನವೇಳೆ ಅವರಿಗೆ ಅವಕಾಶ ನೀಡಲು ಯತ್ನಿಸುತ್ತೇವೆ’’ ಎಂದು ಯೊಶಿರೊ ಹೇಳಿದ್ದಾರೆ.

ಕ್ರೀಡಾ ಜ್ಯೋತಿ ರಿಲೇಯಲ್ಲಿ ಭಾಗವಹಿಸುವ ಓಟಗಾ ರರು ಹಾಗೂ ಸಿಬ್ಬಂದಿ ಜಪಾನ್‌ಗೆ ಆಗಮಿಸಿದ ಬಳಿಕ ಅವರ ಆರೋಗ್ಯದ ಮೇಲೆ ನಿಗಾವಹಿಸಲಾಗುವುದು ಹಾಗೂ ಇವೆಂಟ್‌ನಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ನಿರ್ಬಂಧಿಸಲಾಗುವುದು’’ ಎಂದು ಆಯೋಜಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News