​ಫೆಡ್‌ಕಪ್: ಇತಿಹಾಸ ಸೃಷ್ಟಿಸಿದ ಭಾರತೀಯ ಮಹಿಳಾ ಟೆನಿಸ್ ತಂಡ

Update: 2020-03-08 03:59 GMT
ಅಂಕಿತಾ

ದುಬೈ : ಭಾರತೀಯ ಫೆಡ್ ಕಪ್ ತಂಡ ಶನಿವಾರ ಇತಿಹಾಸಲ್ಲೇ ಮೊಟ್ಟಮೊದಲ ಬಾರಿಗೆ ಪ್ಲೇ ಆಫ್ ಹಂತಕ್ಕೆ ಬಡ್ತಿ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಹದಿಹರೆಯದ ಅರಳು ಪ್ರತಿಭೆ ಅಂಕಿತಾ ರಾಣಾ ಅವರ ಅಮೋಘ ಪ್ರದರ್ಶನ ಮೂಲಕ ಇಂಡೋನೇಷ್ಯಾ ವಿರುದ್ಧ 2-1 ಜಯ ದಾಖಲಿಸಿ ಈ ಐತಿಹಾಸಿಕ ಸಾಧನೆ ಮಾಡಿದೆ.

ಭಾರತದ ರುತುಜಾ ಭೋಸಲೆ ಶ್ರೇಯಾಂಕ ರಹಿತ ಆಟಗಾರ್ತಿ ಪ್ರಿಸ್ಕಾ ಮ್ಯಾಡಲಿನ್ ನುಗ್ರೊಹೊ ವಿರುದ್ಧ ಆಘಾತಕಾರಿ ಸೋಲು ಅನುಭವಿಸುವ ಮೂಲಕ ಭಾರತ ಹಿನ್ನಡೆಯಲ್ಲಿತ್ತು. ಆದರೆ ಅನುಭವಿ ಆಟಗಾರ್ತಿ ಅಲ್ಡಿಲಾ ಸುಜಿಯಾದಿ ವಿರುದ್ಧದ ಪ್ರಮುಖ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸಮಬಲ ಸಾಧಿಸಿದರು.

ಆರಂಭಿಕ ಪಂದ್ಯದಲ್ಲಿ ವಿಶ್ವ ಜೂನಿಯರ್ ರ್ಯಾಂಕಿಂಗ್‌ನಲ್ಲಿ 15ನೇ ಸ್ಥಾನದಲ್ಲಿರುವ 16 ವರ್ಷದ ಇಂಡೋನೇಷ್ಯಾ ಆಟಗಾರ್ತಿ ವಿರುದ್ಧ ರುತುಜಾ 3-6, 6-0, 3-6 ಸೆಟ್‌ಗಳ ಸೋಲು ಅನುಭವಿಸಿದರು. ಆದರೆ ಈ ಹಿಂದೆ ಎರಡು ಸೋಲು ಕಂಡಿದ್ದ ಅಂಕಿತಾ, ಅಲ್ಡಿಲಾ ಸವಾಲನ್ನು 6-3, 6-3 ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು.

ಬಳಿಕ ನಿರ್ಣಾಯಕ ಡಬಲ್ಸ್‌ನಲ್ಲಿ ಅನುಭವಿ ಆಟಗಾರ್ತಿ ಸಾನಿಯಾ ಮಿರ್ಝಾ ಜತೆ ಸೇರಿ 7-6(4), 6-0 ನೇರ ಸೆಟ್‌ಗಳ ಜಯ ಸಾಧಿಸುವ ಮೂಲಕ ಪ್ಲೇ ಆಫ್ಸ್ ಹಂತಕ್ಕೆ ಭಾರತವನ್ನು ಮುನ್ನಡೆಸಿದರು. ಪ್ಲೇ ಆಫ್ಸ್ ಹಂತದ ಪಂದ್ಯಗಳು ಲಾತ್ವಿಯಾ ಅಥವಾ ನೆದರ್ಲೆಂಡ್ಸ್‌ನಲ್ಲಿ ಎಪ್ರಿಲ್‌ನಲ್ಲಿ ನಡೆಯಲಿವೆ.

ಆರಂಭದಲ್ಲಿ 1-4 ಹಿನ್ನಡೆಯಿಂದ ಚೇತರಿಸಿಕೊಂಡ ಭಾರತೀಯ ಜೋಡಿ ಬಳಿಕ ಆಟದ ಲಯ ಕಂಡುಕೊಂಡು ಸುಲಭ ಜಯ ಸಾಧಿಸಿತು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಚೀನಾ ವಿರುದ್ಧ ಸೋತ ಬಳಿಕ ಸತತ ನಾಲ್ಕು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡ ಆರು ತಂಡಗಳ ಗುಂಪಿನಲ್ಲಿ ದ್ವಿತೀಯ ಸ್ಥಾನಿಯಾಯಿತು.

2016ರಲ್ಲಿ ಏಷ್ಯಾ/ಓಶಾನಿಯಾ ಗುಂಪಿಗೆ 2016ರಲ್ಲಿ ತೇರ್ಗಡೆಯಾಗಿದ್ದ ಭಾರತ ಆ ಬಳಿಕ ಪ್ರಾದೇಶಿಕ ಗುಂಪಿನಲ್ಲಿ ಉಳಿದಿತ್ತು. ಅಂಕಿತಾ ರೈನಾ ಅಮೋಘ ಪ್ರದರ್ಶನದ ಬಳಿಕ ಪರಿಸ್ಥಿತಿ ಸುಧಾರಿಸಿತು. ರಿತುಜಾ ಭೋಸಲೆ ಕೂಡಾ ಭಾರತದ ಕೆಲ ಗೆಲುವುಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ನಾಲ್ಕು ವರ್ಷಗಳ ಬಳಿಕ ಫೆಡ್ ಕಪ್ ತಂಡಕ್ಕೆ ಮರಳಿದ್ದ ಸಾನಿಯಾ ಮಿರ್ಝಾ, ಸಹ ಆಟಗಾರರಿಗೆ ಸ್ಫೂರ್ತಿ ಹಾಗೂ ಮಾರ್ಗದರ್ಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News