ವಿಕಾಸ್ ಫೈನಲ್‌ಗೆ
ಅಮ್ಮಾನ್(ಜೋರ್ಡನ್),ಮಾ.10: ಏಶ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ವಿಕಾಸ್ ಕ್ರಿಶನ್(69ಕೆಜಿ) ಫೈನಲ್ ಪ್ರವೇಶಿಸಿದ್ದಾರೆ.
ವಿಕಾಸ್, ಅಮಿತ್ ಪಾಂಘಾಲ್ ಹಾಗೂ ಲವ್ಲೀನಾ ಸೆಮಿ ಫೈನಲ್ ಪ್ರವೇಶಿಸುವ ಮೂಲಕ ಈಗಾಗಲೇ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಮಿತ್ ಹಾಗೂ ಲವ್ಲೀನಾ ಸೆಮಿ ಫೈನಲ್‌ನಲ್ಲಿ ಎಡವಿ ಬೀಳುವುದರೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಕಿಶನ್ ಫೈನಲ್ ಸುತ್ತಿಗೆ ಪ್ರವೇಶಿಸುವುದರೊಂದಿಗೆ ಕನಿಷ್ಠ ಪಕ್ಷ ಬೆಳ್ಳಿ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದರು. ಬಲಗಣ್ಣಿನ ಗಾಯದೊಂದಿಗೆ ಮಂಗಳವಾರ ಇಲ್ಲಿ ಸೆಮಿ ಫೈನಲ್ ಪಂದ್ಯವನ್ನಾಡಿದ ವಿಕಾಸ್ ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ, ಕಝಖ್‌ಸ್ತಾನದ ಅಬ್ಲೈಖಾನ್ ಝುಸ್ಸುಪೊವ್ ವಿರುದ್ಧ ಒಮ್ಮತದ ತೀರ್ಪಿನಲ್ಲಿ ಜಯ ಸಾಧಿಸಿದರು. 28ರ ಹರೆಯದ ವಿಕಾಸ್ ಮುಂದಿನ ಸುತ್ತಿನಲ್ಲಿ ಜೋರ್ಡಾನ್‌ನ ಹುಸೈನ್‌ರನ್ನು ಎದುರಿಸಲಿದ್ದಾರೆ. ಹುಸೈನ್ ಮತ್ತೊಂದು ಸೆಮಿ ಫೈನಲ್‌ನಲ್ಲಿ ಏಶ್ಯನ್ ಚಾಂಪಿಯನ್ ಹಾಗೂ ಅಗ್ರ ಶ್ರೇಯಾಂಕದ ಬೊಬೊ-ಉಸ್ಮೊನ್ ಬಟುರೊವ್‌ರನ್ನು ಸೋಲಿಸಿದರು. ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ವಿಕಾಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಗಾಯಕ್ಕೀಡಾಗಿದ್ದರೂ ಉಳಿದ ಸುತ್ತಿನಲ್ಲಿ ಇಬ್ಬರು ಬಾಕ್ಸರ್‌ಗಳನ್ನು ನೆಲಕ್ಕುರುಳಿಸಲು ಸಫಲರಾಗಿದ್ದಾರೆ.