×
Ad

ಟ್ವೆಂಟಿ-20 ವಿಶ್ವಕಪ್‌ನಲ್ಲಿ ವಿಲಿಯರ್ಸ್‌ಗೆ ಸ್ಥಾನ ನೀಡಬೇಕು

Update: 2020-03-10 23:13 IST

ಹೊಸದಿಲ್ಲಿ, ಮಾ.10: ‘‘ದಕ್ಷಿಣ ಆಫ್ರಿಕಾ ತಂಡ ಈ ಬಾರಿ ವಿಶ್ವಕಪ್ ಜಯಿಸಲು ಕ್ರಿಕೆಟ್ ದಿಗ್ಗಜ ಎಬಿ ಡಿವಿಲಿಯರ್ಸ್‌ರನ್ನು ನಿವೃತ್ತಿ ನಿರ್ಧಾರದಿಂದ ಹೊರಬರುವಂತೆ ಮಾಡುವುದು ಸೇರಿದಂತೆ ಎಲ್ಲವನ್ನೂ ಮಾಡಲು ಸಿದ್ಧವಿರಬೇಕು’’ ಎಂದು ಮಾಜಿ ಆಟಗಾರ ಜಾಂಟಿ ರೋಡ್ಸ್ ಸಲಹೆ ನೀಡಿದ್ದಾರೆ.

 36ರ ಹರೆಯದ ಡಿ’ವಿಲಿಯರ್ಸ್ ಸುಮಾರು ಎರಡು ವರ್ಷಗಳಿಂದ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನ್ನು ಆಡಿಲ್ಲ. ಡಿವಿಲಿಯರ್ಸ್ 2018ರ ಮೇನಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಕಳೆದ ವರ್ಷ 50 ಓವರ್ ವಿಶ್ವಕಪ್‌ಗಿಂತ ಮೊದಲು ತಾನು ಕ್ರಿಕೆಟ್ ನಿವೃತ್ತಿಯಿಂದ ಹೊರಬರಲು ಸಿದ್ಧ ಎಂದು ಡಿವಿಲಿಯರ್ಸ್ ಹೇಳಿಕೊಂಡಿದ್ದರು. ಆದರೆ ಅವರ ಹೇಳಿಕೆಯನ್ನು ರಾಷ್ಟ್ರೀಯ ಆಯ್ಕೆಗಾರರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

  ‘‘ನಾನು ಡಿವಿಲಿಯರ್ಸ್ ಅವರ ದೊಡ್ಡ ಅಭಿಮಾನಿ. ನೀವು ಒಂದು ವೇಳೆ ಟ್ವೆಂಟಿ-20 ವಿಶ್ವಕಪ್‌ನ್ನು ಜಯಿಸಲು ಬಯಸಿದ್ದರೆ, ನೀವು ಏನೂ ಮಾಡಲು ಸಿದ್ಧವಿರಬೇಕಾಗುತ್ತದೆ. ಅವರು ಐಪಿಎಲ್‌ನಲ್ಲಿ ಹೇಗೆ ಆಡುತ್ತಾರೆಂದು ನೋಡುವ ಕಾತರ ನನಗೂ ಇದೆ. ಅವರು ಆಸ್ಟ್ರೇಲಿಯದ ಬಿಗ್ ಬಾಶ್ ಟ್ವೆಂಟಿ-20 ಲೀಗ್‌ನಲ್ಲಿ ಆಡಿದ್ದನ್ನು ನೋಡಿದ್ದೇನೆ. ಎಬಿ ಓರ್ವ ವಿಶೇಷ ಆಟಗಾರ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾದ ಪರ ಆಡದೇ ಇದ್ದರೆ ಅವರಂತಹ ಆಟಗಾರರಿಗೆ ಉತ್ತರಾಧಿಕಾರಿಯನ್ನು ತಯಾರಿಸಬೇಕಾಗಿತ್ತು. ವಿಲಿಯರ್ಸ್‌ರನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡಬಾರದೇಕೆ?. ಡಿವಿಲಿಯರ್ಸ್ ಮತ್ತೊಮ್ಮೆ ವಿಶ್ವಕಪ್‌ನಲ್ಲಿ ಆಡುವುದನ್ನು ನಾನು ಬಯಸುತ್ತೇನೆ’’ ಎಂದು ಇಎಸ್‌ಪಿಎನ್ ಕ್ರಿಕ್‌ಇನ್‌ಫೋಗೆ ತಿಳಿಸಿದ್ದಾರೆ.

 ಈ ಬಾರಿಯ ಐಸಿಸಿ ಟ್ವೆಂಟಿ-20 ವಿಶ್ವಕಪ್ ಅಕ್ಟೋಬರ್ 18ರಿಂದ ಆರಂಭವಾಗಲಿದೆ. ನವೆಂಬರ್ 15ರಂದು ಫೈನಲ್ ಪಂದ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News