1,500 ತಾಲಿಬಾನ್ ಕೈದಿಗಳ ಬಿಡುಗಡೆಗೆ ಅಫ್ಘಾನ್ ಸರಕಾರದಿಂದ ಆದೇಶ

Update: 2020-03-11 16:53 GMT

ಕಾಬೂಲ್ (ಅಫ್ಘಾನಿಸ್ತಾನ), ಮಾ. 11: ಅಫ್ಘಾನಿಸ್ತಾನದಲ್ಲಿ 18 ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದ ನೇರ ಮಾತುಕತೆಯನ್ನು ಭಯೋತ್ಪಾದಕ ಗುಂಪು ತಾಲಿಬಾನ್ ಜೊತೆಗೆ ನಡೆಸಲು ಸಾಧ್ಯವಾಗುವಂತೆ, 1,500 ತಾಲಿಬಾನ್ ಕೈದಿಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲು ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಒಪ್ಪಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಎರಡು ಪುಟಗಳ ಆದೇಶಕ್ಕೆ ಘನಿ ಸಹಿ ಹಾಕಿದ್ದಾರೆ. ಈ ಆದೇಶದ ಪ್ರಕಾರ, ಯುದ್ಧಭೂಮಿಗೆ ಮರಳುವುದಿಲ್ಲ ಎಂಬ ಲಿಖಿತ ಖಾತರಿಯನ್ನು ಬಿಡುಗಡೆಗೊಳ್ಳುವ ಎಲ್ಲ ತಾಲಿಬಾನ್ ಕೈದಿಗಳು ನೀಡಬೇಕಾಗುತ್ತದೆ.

ಕೈದಿಗಳನ್ನು ಹೇಗೆ ವ್ಯವಸ್ಥಿತವಾಗಿ ಬಿಡುಗಡೆ ಮಾಡಲಾಗುತ್ತದೆ ಎಂಬ ವಿವರಗಳನ್ನು ಆದೇಶದಲ್ಲಿ ನೀಡಲಾಗಿದೆ. ಕೈದಿಗಳ ಬಿಡುಗಡೆ ಪ್ರಕ್ರಿಯೆಯು ನಾಲ್ಕು ದಿನಗಳಲ್ಲಿ ಆರಂಭಗೊಳ್ಳಲಿದೆ.

‘‘1,500 ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯು 15 ದಿನಗಳಲ್ಲಿ ಮುಕ್ತಾಯಗೊಳ್ಳುತ್ತದೆ. ಪ್ರತಿ ದಿನ 100 ಕೈದಿಗಳು ಅಫ್ಘಾನ್ ಜೈಲುಗಳಿಂದ ಹೊರನಡೆಯಲಿದ್ದಾರೆ’’ ಎಂದು ಆದೇಶ ಹೇಳುತ್ತದೆ.

ಕೈದಿಗಳ ಬಿಡುಗಡೆಯ ಜೊತೆ ಜೊತೆಗೇ, ಅಫ್ಘಾನ್ ಸರಕಾರ ಮತ್ತು ತಾಲಿಬಾನ್ ನಡುವೆ ದೇಶದ ಸುದೀರ್ಘ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದ ಮಾತುಕತೆಯೂ ಸಾಗುತ್ತದೆ.

ಯುದ್ಧವನ್ನು ಕೊನೆಗೊಳಿಸುವುದಕ್ಕಾಗಿ ಅಮೆರಿಕ ಸರಕಾರ ಮತ್ತು ತಾಲಿಬಾನ್ ಕತರ್‌ನಲ್ಲಿ ಫೆಬ್ರವರಿ 29ರಂದು ಶಾಂತಿ ಒಪ್ಪಂದವೊಂದಕ್ಕೆ ಸಹಿ ಹಾಕಿವೆ.

ಪ್ರಗತಿ ಇದ್ದರೆ 5,000 ಕೈದಿಗಳ ಬಿಡುಗಡೆ: ಅಫ್ಘಾನ್

ಮಾತುಕತೆಯಲ್ಲಿ ಪ್ರಗತಿ ಕಂಡುಬಂದರೆ, ಪ್ರತಿ ಎರಡು ವಾರಗಳಿಗೊಮ್ಮೆ ಹೆಚ್ಚುವರಿಯಾಗಿ 500 ತಾಲಿಬಾನ್ ಕೈದಿಗಳನ್ನು ಬಿಡುಗಡೆಗೊಳಿಸಲಾಗುತ್ತದೆ ಹಾಗೂ ಈ ಪ್ರಕ್ರಿಯೆಯು ಒಟ್ಟು 5,000 ಕೈದಿಗಳು ಬಿಡುಗಡೆಗೊಳ್ಳುವವರೆಗೆ ಮುಂದುವರಿಯುತ್ತದೆ.

ಈ ಅವಧಿಯಲ್ಲಿ ಮತ್ತು ಅದರ ಬಳಿಕವೂ ಹಿಂಸಾಚಾರದಲ್ಲಿ ಕಡಿತ ಮಾಡುವ ತನ್ನ ಬದ್ಧತೆಗೆ ತಾಲಿಬಾನ್ ಅಂಟಿಕೊಳ್ಳಬೇಕಾಗುತ್ತದೆ ಎಂದು ಸರಕಾರಿ ಆದೇಶ ತಿಳಿಸಿದೆ.

1,000 ಸರಕಾರಿ ಸೈನಿಕರ ಬಿಡುಗಡೆಗೆ ತಾಲಿಬಾನ್ ಮುಂದು

ಕೈದಿಗಳ ವಿನಿಮಯ ಒಪ್ಪಂದದಂತೆ ಅಫ್ಘಾನ್ ಸರಕಾರ ಬಿಡುಗಡೆಗೊಳಿಸುವ ತಾಲಿಬಾನ್ ಕೈದಿಗಳನ್ನು ಕರೆತರಲು ತಾಲಿಬಾನ್ ಕಮಾಂಡರ್‌ಗಳು ವಾಹನಗಳನ್ನು ಕಳುಹಿಸಿದ್ದಾರೆ.

ಅದೇ ವೇಳೆ, 1,000 ಸರಕಾರಿ ಸೈನಿಕರನ್ನು ಹಸ್ತಾಂತರಿಸುವ ಮೂಲಕ ತಾವು ಒಪ್ಪಂದವನ್ನು ಮಾನ್ಯ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News