ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಭಾಗವಹಿಸುವುದು ಅನುಮಾನ
ಹೊಸದಿಲ್ಲಿ, ಮಾ.12: ಮಾರಣಾಂತಿಕ ಕೊರೋನ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ವೀಸಾಗೆ ಸಂಬಂಧಿಸಿ ಹೊಸ ನಿರ್ಬಂಧ ಹೇರಿರುವ ಕಾರಣ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಟ್ವೆಂಟಿ-20 ಟೂರ್ನಿಯಲ್ಲಿ ವಿದೇಶಿ ಆಟಗಾರರು ಭಾಗವಹಿಸುವುದು ಅನುಮಾನವಾಗಿದೆ. ಈ ಎಲ್ಲ ಬೆಳವಣಿಗೆಯ ಹೊರತಾಗಿಯೂ ಬಿಸಿಸಿಐ ಕಾದು ನೋಡುವ ನಿಯಮಕ್ಕೆ ಮೊರೆ ಹೋಗಲು ನಿರ್ಧರಿಸಿದೆ.
ದೇಶದಲ್ಲಿ ಕೊರೋನ ವೈರಸ್ ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಾಜತಾಂತ್ರಿಕ, ಉದ್ಯೋಗ ಹಾಗೂ ಪ್ರೊಜೆಕ್ಟ್ ವೀಸಾ ಹೊರತುಪಡಿಸಿ ಚಾಲ್ತಿಯಲ್ಲಿರುವ ಎಲ್ಲ ವಿದೇಶಿ ವೀಸಾಗಳಿಗೆ ಮಾ.13ರಿಂದ ಎಪ್ರಿಲ್ 15ರ ತನಕ ತಾತ್ಕಾಲಿಕ ನಿರ್ಬಂಧ ಹೇರಲು ನಿರ್ಧರಿಸಿದೆ. ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲು ಬಿಸಿಸಿಐ ಇನ್ನು ಕೆಲವು ದಿನ ಕಾದುನೋಡಲು ಬಯಸಿದೆ.
‘‘ದಯವಿಟ್ಟು ನಮಗೆ ಎರಡು ದಿನಗ ಕಾಲಾವಕಾಶ ನೀಡಿ. ಈ ಕ್ಷಣದಲ್ಲಿ ಸಂಪೂರ್ಣ ವಿವರ ನೀಡಲು ಸಾಧ್ಯವಿಲ್ಲ’’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದಲ್ಲಿ ಈ ತನಕ 60 ಮಂದಿ ಕೊರೋನ ವೈರಸ್ ಪೀಡಿತರು ಪತ್ತೆಯಾಗಿದ್ದು, ವಿಶ್ವದಾದ್ಯಂತ 4,000ಕ್ಕೂ ಅಧಿಕ ಮಂದಿ ವೈರಸ್‌ಗೆ ಬಲಿಯಾಗಿದ್ದಾರೆ.
ಈ ವರ್ಷದ ಐಪಿಎಲ್ ಟೂರ್ನಿಯು ಮಾರ್ಚ್ 29ರಿಂದ ಆರಂಭವಾಗಲಿದ್ದು, ಖಾಲಿ ಸ್ಟೇಡಿಯಂ ಮುಂದೆಯೇ ಟೂರ್ನಿ ನಡೆಯಬೇಕಾಗಿದೆ. ಈ ಕುರಿತು ಐಪಿಎಲ್ ಆಡಳಿತ ಮಂಡಳಿಯು ಮುಂಬೈನಲ್ಲಿ ಮಾ.14ರಂದು ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಐಪಿಎಲ್‌ನಲ್ಲಿ ಆಡಲು ಭಾರತಕ್ಕೆ ಬರಲಿರುವ 60 ವಿದೇಶಿ ಆಟಗಾರರ ಬಗ್ಗೆ ಬಿಸಿಸಿಐ ಗೊಂದಲದಲ್ಲಿದೆ. ಈ ಎಲ್ಲ ಆಟಗಾರರ ವೀಸಾ ರದ್ದಾಗಲಿದೆಯೇ ಎಂಬ ಕುರಿತು ನಮಗೆ ಸ್ಪಷ್ಟತೆ ಇಲ್ಲ ಎಂದು ಕ್ರಿಕೆಟ್ ಮಂಡಳಿ ತಿಳಿಸಿದೆ.
ಮಹಾರಾಷ್ಟ್ರ ಸರಕಾರ ರಾಜ್ಯದಲ್ಲಿ ಐಪಿಎಲ್ ಪಂದ್ಯಗಳಿಗೆ ತಡೆಯೊಡ್ಡುವ ಸಾಧ್ಯತೆ ಇದೆ ಎನ್ನಲಾಗಿದೆ. ಖಾಲಿ ಸ್ಟೇಡಿಯಂನೊಳಗೆ ಪಂದ್ಯವನ್ನು ಆಯೋಜಿಸುವುದು ಸದ್ಯಕ್ಕಿರುವ ಪರಿಹಾರವಾಗಿದೆ.