ಕುತೂಹಲ ಘಟ್ಟದಲ್ಲಿ ರಣಜಿ ಫೈನಲ್: ಗೆಲುವಿಗೆ ಬಂಗಾಳ- ಸೌರಾಷ್ಟ್ರ ಮಧ್ಯೆ ತೀವ್ರ ಪೈಪೋಟಿ
ರಾಜ್‌ಕೋಟ್, ಮಾ.12: ಆತಿಥೇಯ ಸೌರಾಷ್ಟ್ರ ಹಾಗೂ ಬಂಗಾಳದ ನಡುವೆ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯ ಕುತೂಹಲ ಘಟ್ಟವನ್ನು ತಲುಪಿದೆ. ರಣಜಿ ಟ್ರೋಫಿ ಗೆಲುವಿಗಾಗಿ ಉಭಯ ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಔಟಾಗದೆ 58 ರನ್ ಗಳಿಸಿರುವ ಬಂಗಾಳದ ಆಪತ್ಬಾಂಧವ ಅನುಸ್ತುಪ್ ಮಜುಂದಾರ್ ಅವರು ಸೌರಾಷ್ಟ್ರದ ರಣಜಿ ಟ್ರೋಫಿ ಗೆಲುವಿಗೆ ಅಡ್ಡಲಾಗಿ ನಿಂತಿದ್ದಾರೆ. ಬಂಗಾಳ ಅಂತಿಮ ದಿನವಾಗಿರುವ ಶುಕ್ರವಾರ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿ ರಣಜಿ ಟ್ರೋಫಿ ಮೇಲೆ ಅಧಿಕಾರ ಚಲಾಯಿಸಲು ಇನ್ನ್ನೂ 72 ರನ್ ಗಳಿಸಬೇಕಾಗಿದೆ. ಮತ್ತೊಂದೆಡೆ ಸೌರಾಷ್ಟ್ರ ಎದುರಾಳಿ ಬಂಗಾಳ ತಂಡದ ಇನ್ನುಳಿದ ನಾಲ್ಕು ವಿಕೆಟ್‌ಗಳನ್ನು ಬೇಗನೆ ಉರುಳಿಸಿದರೆ ಚೊಚ್ಚಲ ರಣಜಿ ಟ್ರೋಫಿ ಎತ್ತಿ ಹಿಡಿಯುವುದು ಖಚಿತವಾಗಲಿದೆ.
ಯಾವ ತಂಡ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆಯುತ್ತದೋ, ಆ ತಂಡಕ್ಕೆ ರಣಜಿ ಟ್ರೋಫಿ ಒಲಿಯಲಿದೆ. ಸೌರಾಷ್ಟ್ರ ಮೊದಲ ಇನಿಂಗ್ಸ್‌ನಲ್ಲಿ 425 ರನ್ ಗಳಿಸಿ ಆಲೌಟಾಗಿತ್ತು. ನಾಲ್ಕನೇ ದಿನದಾಟದ ತನಕ ಎರಡೂ ತಂಡಗಳಿಗೆ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಲಭಿಸಿಲ್ಲ. ಶುಕ್ರವಾರ ಐದನೇ ಹಾಗೂ ಅಂತಿಮ ದಿನದಾಟ 15 ನಿಮಿಷ ಬೇಗನೆ ಆರಂಭವಾಗಲಿದ್ದು, ಈ ವರ್ಷದ ರಣಜಿ ಟ್ರೋಫಿ ಚಾಂಪಿಯನ್ ಯಾರೆಂಬ ವಿಚಾರ ಬೆಳಗ್ಗಿನ ಅವಧಿಯಲ್ಲೇ ಖಚಿತವಾಗುವ ಸಾಧ್ಯತೆಯಿದೆ.
ನಾಲ್ಕನೇ ದಿನವಾದ ಗುರುವಾರ ಆಟ ಕೊನೆಗೊಂಡಾಗ ಬಂಗಾಳ 6 ವಿಕೆಟ್‌ಗಳ ನಷ್ಟಕ್ಕೆ 354 ರನ್ ಗಳಿಸಿತ್ತು. ಅರ್ನಾಬ್ ನಂದಿ(ಔಟಾಗದೆ 28, 82 ಎಸೆತ)ಅವರೊಂದಿಗೆ ಏಳನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 91 ರನ್ ಸೇರಿಸಿದ ಮಜುಂದಾರ್ ಬಂಗಾಳಕ್ಕೆ ಟ್ರೋಫಿ ಗೆದ್ದುಕೊಡುವ ಗೆಲುವಿನ ವಿಶ್ವಾಸ ಮೂಡಿಸಿದ್ದಾರೆ. ಜಯದೇವ್ ಉನದ್ಕಟ್ ಬೌಲಿಂಗ್‌ನಲ್ಲಿ ಕೈ ಬೆರಳಿಗೆ ಗಾಯವಾಗಿದ್ದರೂ ಅದನ್ನು ಲೆಕ್ಕಿಸದೇ ಆಡುತ್ತಿರುವ ಮಜುಂದಾರ್(ಔಟಾಗದೆ 58, 134 ಎಸೆತ, 8 ಬೌಂಡರಿ) ಬಂಗಾಳಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ತಂದುಕೊಡಲೇಬೇಕೆಂಬ ಛಲದಲ್ಲಿ ಆಡುತ್ತಿದ್ದಾರೆ.
ಮಜುಂದರ್ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಹಾಗೂ ಸೆಮಿ ಫೈನಲ್ ಪಂದ್ಯದಲ್ಲೂ ಬಂಗಾಳ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಿದ್ದರು. ಇದೀಗ ಮತ್ತೊಮ್ಮೆ ತಂಡದ ರಕ್ಷಣೆಗೆ ನಿಂತಿರುವ ಮಜುಂದಾರ್‌ಗೆ ನಂದಿ ಬೆಂಬಲಕ್ಕೆ ನಿಂತಿದ್ದಾರೆ.
ಆತಿಥೇಯ ತಂಡ ಕಳಪೆ ಫೀಲ್ಡಿಂಗ್‌ನ ಮೂಲಕ ಬಂಗಾಳ ತಂಡ ದಿನದ ಕೊನೆಯ ಅವಧಿಯಲ್ಲಿ 90 ರನ್ ಕಲೆಹಾಕಲು ಅವಕಾಶ ನೀಡಿದೆ. ಸ್ಲಿಪ್‌ನಲ್ಲಿ ಫೀಲ್ಡಿಂಗ್ ನಿರತವಾಗಿದ್ದ ಹಾರ್ದಿಕ್ ದೇಸಾಯಿ ಅವರು ಮಜುಂದಾರ್ ನೀಡಿದ್ದ ಕ್ಯಾಚನ್ನು ಕೈಚೆಲ್ಲಿದ್ದಾರೆ. ದೇಸಾಯಿಯಿಂದ ಜೀವದಾನ ಲಭಿಸಿದಾಗ ಮಜುಂದಾರ್ 10 ರನ್ ಗಳಿಸಿದ್ದರು. ಮಜುಂದಾರ್ ಕ್ಯಾಚ್ ಕೈಚೆಲ್ಲಿರುವುದು ಸೌರಾಷ್ಟ್ರಕ್ಕೆ ದುಬಾರಿಯಾದಂತೆ ಕಾಣುತ್ತಿದೆ.
ನಾಲ್ಕನೇ ದಿನವಾದ ಗುರುವಾರ ಬಂಗಾಳ ತಂಡ ಬೆಳಗ್ಗೆ ಹಾಗೂ ಸಂಜೆಯ ಅವಧಿಯಲ್ಲಿ ಮೇಲುಗೈ ಸಾಧಿಸಿತು. ಸೌರಾಷ್ಟ್ರ ಮಧ್ಯಾಹ್ನದ ವೇಳೆಗೆ ಮೂರು ವಿಕೆಟ್ ಉರುಳಿಸಲು ಸಫಲವಾಗಿತ್ತು. ಇದಕ್ಕೂ ಮೊದಲು ಸೌರಾಷ್ಟ್ರ ತಂಡ 3 ವಿಕೆಟ್ ನಷ್ಟಕ್ಕೆ 134 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿತು. ಬ್ಯಾಟಿಂಗ್ ಮುಂದುವರಿಸಿದ ಸುದೀಪ್ ಚಟರ್ಜಿ(81,241 ಎಸೆತ, 7 ಬೌಂಡರಿ) ಹಾಗೂ ವೃದ್ದಿಮಾನ್ ಸಹಾ(64, 184 ಎಸೆತ, 10 ಬೌಂಡರಿ, 1 ಸಿಕ್ಸರ್)ನಾಲ್ಕನೇ ವಿಕೆಟ್‌ಗೆ 101 ರನ್ ಜೊತೆಯಾಟ ನಡೆಸಿ ಬಂಗಾಳದ ಹೋರಾಟವನ್ನು ಜಾರಿಯಲ್ಲಿರಿಸಿದರು. ಬೆಳಗ್ಗಿನ ಅವಧಿಯಲ್ಲಿ 29 ಓವರ್‌ಗಳಲ್ಲಿ 89 ರನ್ ಕಲೆ ಹಾಕಿದ ಚಟರ್ಜಿ-ಸಹಾ ಜೋಡಿ ಸೌರಾಷ್ಟ್ರ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು.
47ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಚಟರ್ಜಿ ಆಕರ್ಷಕ ರಕ್ಷಣಾತ್ಮಕ ಆಟದಿಂದ ಗಮನ ಸೆಳೆದರೆ, ಈ ಋತುವಿನಲ್ಲಿ ಮೊದಲ ರಣಜಿ ಟ್ರೋಫಿ ಪಂದ್ಯ ಆಡಿರುವ ಭಾರತದ ಟೆಸ್ಟ್ ವಿಕೆಟ್‌ಕೀಪರ್ ಸಹಾ ಎರಡು ಬಾರಿ ಅಂಪೈರ್ ತೀರ್ಪು ಪರಾಮರ್ಶೆ ಪದ್ಧತಿ(ಡಿಆರ್‌ಎಸ್) ಮೂಲಕ ಎಲ್ಬಿಡಬ್ಲು ಬಲೆಗೆ ಬೀಳುವುದರಿಂದ ಬಚಾವಾಗಿದ್ದರು. 46 ರನ್ ಗಳಿಸಿದ್ದಾಗ ಜೀವ ದಾನ ಪಡೆದಿದ್ದ ಸಹಾ ಆ ನಂತರ ಅರ್ಧಶತಕ ಪೂರೈಸಿದರು. ಲಂಚ್ ವಿರಾಮದ ಬಳಿಕ ಚಟರ್ಜಿ ವಿಕೆಟ್‌ನ್ನು ಪಡೆದ ಜಡೇಜ ಸೌರಾಷ್ಟ್ರ ನಿಟ್ಟುಸಿರುಬಿಡುವಂತೆ ಮಾಡಿದರು. ಚಟರ್ಜಿ ಔಟಾದ ಬಳಿಕ ಸೌರಾಷ್ಟ್ರ ತಂಡ ಬಂಗಾಳಕ್ಕೆ ಒತ್ತಡ ಹೇರಲು ಯತ್ನಿಸಿತು. ಸಹಾ ಮಧ್ಯಮ ವೇಗದ ಬೌಲರ್ ಪ್ರೇರಕ್ ಮಂಕಡ್‌ಗೆ ಕ್ಲೀನ್‌ಬೌಲ್ಡಾದರು. ಎಡಗೈ ವೇಗದ ಬೌಲರ್ ಚೇತನ್ ಸಕಾರಿಯಾ ಅವರು ಶಹಬಾಝ್ ಅಹ್ಮದ್‌ರನ್ನು ಕ್ಲೀನ್‌ಬೌಲ್ಡ್ ಮಾಡಿದಾಗ ಬಂಗಾಳದ ಸ್ಕೋರ್ 263ಕ್ಕೆ 6.
ದಿನದ ಕೊನೆಯ ಸೆಶನ್‌ನಲ್ಲಿ ಸೌರಾಷ್ಟ್ರ ತಂಡ 28 ಓವರ್‌ಗಳಲ್ಲಿ ಕೇವಲ 46 ರನ್ ನೀಡಿ ಮೂರು ವಿಕೆಟ್‌ಗಳನ್ನು ಉರುಳಿಸಿತು.
ಸ್ಕೋರ್ ವಿವರ
ಸೌರಾಷ್ಟ್ರ ಮೊದಲ ಇನಿಂಗ್ಸ್: 425 ರನ್‌ಗೆ ಆಲೌಟ್
ಬಂಗಾಳ ಮೊದಲ ಇನಿಂಗ್ಸ್: 354/6
ಸುದೀಪ್ ಕುಮಾರ್ ಸಿ ಜಡೇಜ ಬಿ ಜಡೇಜ 26
ಈಶ್ವರನ್ ಎಲ್ಬಿಡಬ್ಲು ಮಂಕಡ್ 09
ಸುದೀಪ್ ಚಟರ್ಜಿ ಸಿ ಜಡೇಜ ಬಿ ಜಡೇಜ 81
ಮನೋಜ್ ತಿವಾರಿ ಎಲ್ಬಿಡಬ್ಲು ಬಿ ಜಾನಿ 35
ವೃದ್ದಿಮಾನ್ ಸಹಾ ಬಿ ಮಂಕಡ್ 64
ಮಜುಂದಾರ್ ಔಟಾಗದೆ 58
ಶಹಬಾಝ್ ಅಹ್ಮದ್ ಬಿ ಸಕಾರಿಯ 16
ನಂದಿ ಔಟಾಗದೆ 28
ಇತರ 37
ವಿಕೆಟ್ ಪತನ: 1-35, 2-35, 3-124, 4-225, 5-241, 6-263.
ಬೌಲಿಂಗ್ ವಿವರ
ಜಯದೇವ ಉನದ್ಕಟ್ 30-08-84-0
ಸಕಾರಿಯ 23-06-52-01
ಡಿಎ ಜಡೇಜ 50-14-106-02
ಪ್ರೇರಕ್ ಮಂಕಡ್ 21-07-45-02
ಚಿರಾಗ್ ಜಾನಿ 23-08-32-01.