ಆಲ್ ಇಂಗ್ಲೆಂಡ್ ಓಪನ್: ಮೊದಲ ಸುತ್ತಿನಲ್ಲಿ ಸೈನಾಗೆ ಸೋಲು

Update: 2020-03-12 17:19 GMT

ಬರ್ಮಿಂಗ್‌ಹ್ಯಾಮ್,ಮಾ.12: ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ. ಈ ಮೂಲಕ ಅವರ ಒಲಿಂಪಿಕ್ಸ್‌ಗೆ ತೇರ್ಗಡೆಯಾಗುವ ಅವಕಾಶಕ್ಕೆ ಹಿನ್ನಡೆಯಾಗಿದೆ.

ಇಲ್ಲಿ ಬುಧವಾರ ಕೇವಲ 28 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ ಜಪಾನ್‌ನ ಎದುರಾಳಿ ಅಕಾನೆ ಯಮಗುಚಿ ವಿರುದ್ಧ 11-21, 8-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಇದೇ ವೇಳೆ, ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಯುವ ಶಟ್ಲರ್ ಲಕ್ಷ ಸೇನ್ ಶುಭಾರಂಭ ಮಾಡಿ ಗಮನ ಸೆಳೆದರು. ಸೇನ್ 59 ನಿಮಿಷಗಳ ಕಾಲ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಹಾಂಕಾಂಗ್‌ನ ಚೆವುಕ್ ಯಿವು ಲೀ ವಿರುದ್ಧ 17-21, 21-8, 21-17 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು.

ಸೇನ್ ಕ್ವಾರ್ಟರ್ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎರಡನೇ ಶ್ರೇಯಾಂಕದ ಹಾಗೂ ವಿಶ್ವದ ನಂ.7ನೇ ಆಟಗಾರ ಡೆನ್ಮಾರ್ಕ್ ನ ವಿಕ್ಟರ್ ಅಕ್ಸೆಲ್‌ಸನ್‌ರನ್ನು ಎದುರಿಸಲಿದ್ದಾರೆ.

ಬಿಡಬ್ಲುಎಫ್ ರ್ಯಾಂಕಿಂಗ್‌ನಲ್ಲಿ 46,267 ಅಂಕದೊಂದಿಗೆ 20ನೇ ಸ್ಥಾನದಲ್ಲಿರುವ ಸೈನಾ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬೇಕಾದರೆ ಎಪ್ರಿಲ್ 28ರೊಳಗೆ ಅಗ್ರ-16ರಲ್ಲಿ ಸ್ಥಾನ ಪಡೆಯಬೇಕಾಗಿದೆ.

 ಸೈನಾ ನಿರ್ಣಾಯಕ ರ್ಯಾಂಕಿಂಗ್ ಪಾಯಿಂಟ್ಸ್ ಗಳಿಸಬೇಕಾದರೆ ಪ್ರಬಲ ಪ್ರದರ್ಶನ ನೀಡಬೇಕಾಗುತ್ತದೆ. ಮಾರಣಾಂತಿಕ ಕೊರೋನ ವೈರಸ್‌ನಿಂದಾಗಿ ಹಲವು ಕ್ರೀಡಾ ಸ್ಪರ್ಧೆಗಳು ರದ್ದುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೈನಾಗೆ ಇನ್ನಷ್ಟು ಪಂದ್ಯ ಆಡಲು ಸಾಧ್ಯವಿದೆಯೇ ಎಂದು ಕಾದು ನೋಡಬೇಕಾಗಿದೆ.

29ರ ಹರೆಯದ ಸೈನಾ ಮುಂಬರುವ ದಿನಗಳಲ್ಲಿ ಸ್ವಿಸ್ ಓಪನ್(ಮಾರ್ಚ್ 17-22), ಇಂಡಿಯಾ ಓಪನ್(ಮಾರ್ಚ್ 24-29) ಹಾಗೂ ಮಲೇಶ್ಯ ಓಪನ್(ಮಾರ್ಚ್ 31-ಎಪ್ರಿಲ್ 5)ಟೂರ್ನಿಗಳಲ್ಲಿ ಸ್ಪರ್ಧಿಸಲಿದ್ದಾರೆ.

ಸೈನಾ ಅವರು ಜಪಾನ್‌ನ ಆಟಗಾರ್ತಿ ಯಮಗುಚಿ ವಿರುದ್ಧ ಆಡಿರುವ 11 ಪಂದ್ಯಗಳಲ್ಲಿ 9ನೇ ಸೋಲು ಕಂಡರು. ಈ ಋತುವಿನಲ್ಲಿ ಮೂರನೇ ಬಾರಿ ಮೊದಲ ಸುತ್ತಿನಲ್ಲಿ ಮುಗ್ಗರಿಸಿದರು. ಸೈನಾ ಸೋಲಿನೊಂದಿಗೆ ಹಾಲಿ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧೆಯಲ್ಲಿರುವ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ. ಸಿಂಧು ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಬೆವಿನ್ ಝಾಂಗ್‌ರನ್ನು ನೇರ ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ.

ಪಿ. ಕಶ್ಯಪ್ ಶೆಸರ್ ಹಿರೇನ್ ರುಸ್ಟಾವಿಟೊ ವಿರುದ್ಧ ಮೊದಲ ಸುತ್ತಿನ ಪಂದ್ಯದಲ್ಲಿ ಗಾಯಗೊಂಡು ನಿವೃತ್ತಿಯಾಗಿದ್ದರೆ, ಬಿ.ಸಾಯಿ ಪ್ರಣೀತ್ ಬುಧವಾರ ಮೊದಲ ಸುತ್ತಿನಲ್ಲೇ ಸೋತಿದ್ದರು. ಹೀಗಾಗಿ 18ರ ಹರೆಯದ ಸೇನ್ ಪುರುಷರ ಸಿಂಗಲ್ಸ್‌ನಲ್ಲಿ ಸ್ಪರ್ಧಾಕಣದಲ್ಲಿರುವ ಭಾರತದ ಏಕೈಕ ಆಟಗಾರನಾಗಿದ್ದಾರೆ.

ಕಶ್ಯಪ್ ಹಾಗೂ ಶೆಸರ್ ಹಿರೇನ್ ನಡುವಿನ ಪಂದ್ಯ ಕೇವಲ ಒಂದು ನಿಮಿಷದಲ್ಲಿ ಕೊನೆಗೊಂಡಿತು. ಕಶ್ಯಪ್ ಗಾಯಗೊಂಡು ಪಂದ್ಯದಿಂದ ನಿವೃತ್ತಿಯಾಗುವ ವೇಳೆಗೆ 0-3 ಹಿನ್ನಡೆಯಲ್ಲಿದ್ದರು. ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಬ್ರಿಟನ್‌ನ ಜೋಡಿ ಜೆನ್ನಿ ಮೂರ್ ಹಾಗೂ ವಿಕ್ಟೋರಿಯ ವಿಲಿಯಮ್ಸ್ ರನ್ನು ಮುಖಾಮುಖಿಯಾಗುವುದರೊಂದಿಗೆ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News