ಝಿಂಬಾಬ್ವೆ ವಿರುದ್ಧ ಟ್ವೆಂಟಿ-20 ಸರಣಿ ಜಯಿಸಿದ ಬಾಂಗ್ಲಾದೇಶ

Update: 2020-03-12 18:08 GMT

ಢಾಕಾ, ಮಾ.12: ಭರ್ಜರಿ ಫಾರ್ಮ್ ಮುಂದುವರಿಸಿದ ಆರಂಭಿಕ ಬ್ಯಾಟ್ಸ್‌ಮನ್ ಲಿಟನ್ ದಾಸ್ ದ್ವಿತೀಯ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ ಬಾಂಗ್ಲಾದೇಶ 9 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಲು ನೆರವಾದರು. ಈ ಗೆಲುವಿನ ಮೂಲಕ ಬಾಂಗ್ಲಾ 2 ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿದೆ.

ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಝಿಂಬಾಬ್ವೆ ತಂಡವನ್ನು 7 ವಿಕೆಟ್‌ಗಳ ನಷ್ಟಕ್ಕೆ 119 ರನ್‌ಗೆ ನಿಯಂತ್ರಿಸಿದ ಬಾಂಗ್ಲಾದೇಶ 15.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿತು. ಸತತ ಎರಡನೇ ಅರ್ಧಶತಕ(ಔಟಾಗದೆ 60, 45 ಎಸೆತ)ಸಿಡಿಸಿದ ಲಿಟನ್ ದಾಸ್ ತಂಡದ ಗೆಲುವಿನ ಹಾದಿ ಸುಗಮಗೊಳಿಸಿದರು. ದಾಸ್ ಏಕದಿನ ಸರಣಿಯಲ್ಲಿ ಎರಡು ಶತಕ ಸಿಡಿಸಿ ಮಿಂಚಿದ್ದರು.

ಗೆಲ್ಲಲು ಸುಲಭ ಸವಾಲನ್ನು ಬೆನ್ನಟ್ಟಿದ ಬಾಂಗ್ಲಾದೇಶದ ಪರ ಮೊದಲ ವಿಕೆಟ್‌ನಲ್ಲಿ 77 ರನ್ ಜೊತೆಯಾಟ ನಡೆಸಿದ ಲಿಟನ್ ದಾಸ್ 45 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ ಔಟಾಗದೆ 60 ರನ್ ಗಳಿಸಿದರು. ತಮೀಮ್ ಇಕ್ಬಾಲ್ ವಿಶ್ರಾಂತಿ ಪಡೆದ ಕಾರಣ ನಯೀಮ್(33)ಜೊತೆಗೆ ದಾಸ್ ಇನಿಂಗ್ಸ್ ಆರಂಭಿಸಿದರು. ನಯೀಮ್ ಅವರು ಕ್ರಿಸ್ ಮಪೊಫು ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಸೌಮ್ಯ ಸರ್ಕಾರ್ ಔಟಾಗದೆ 20 ರನ್ ಗಳಿಸಿದರು. ಮಪೊಫು ಬೌಲಿಂಗ್‌ನಲ್ಲಿ ಒಂದು ರನ್ ಗಳಿಸಿದ ಲಿಟನ್ ದಾಸ್ ಇನ್ನೂ 25 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.

48 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಔಟಾಗದೆ 59 ರನ್ ಗಳಿಸಿದ ಮಾಜಿ ನಾಯಕ ಬ್ರೆಂಡನ್ ಟೇಲರ್ ಝಿಂಬಾಬ್ವೆ ಗೌರವಾರ್ಹ ಮೊತ್ತ ಗಳಿಸಲು ನೆರವಾದರು. ಟೇಲರ್ ಅವರು ಕ್ರೆಗ್ ಎರ್ವಿನ್(29) ಅವರೊಂದಿಗೆ 2ನೇ ವಿಕೆಟ್‌ಗೆ 57 ರನ್ ಜೊತೆಯಾಟ ನಡೆಸಿದರು. ಆದರೆ, ಬಿಗಿಯಾದ ಬೌಲಿಂಗ್ ಮಾಡಿದ ಬಾಂಗ್ಲಾ ಬೌಲರ್‌ಗಳು ಝಿಂಬಾಬ್ವೆ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು.

ಅಲ್-ಅಮೀನ್ ಹುಸೈನ್(2-22) ಹಾಗೂ ಮುಸ್ತಫಿಝರ್ರಹ್ಮಾನ್(2-25)ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಬಾಂಗ್ಲಾದೇಶ ತಂಡ ಝಿಂಬಾಬ್ವೆ ವಿರುದ್ಧದ ಏಕದಿನ ಅಂತರ್‌ರಾಷ್ಟ್ರೀಯ ಸರಣಿಯನ್ನು 3-0 ಅಂತರದಿಂದಲೂ ಹಾಗೂ ಏಕೈಕ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 106 ರನ್‌ಗಳ ಅಂತರದಿಂದಲೂ ಗೆದ್ದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News