ಸೌರಾಷ್ಟ್ರಕ್ಕೆ ಚೊಚ್ಚಲ ರಣಜಿ ಟ್ರೋಫಿ

Update: 2020-03-13 11:55 GMT

ರಾಜ್‌ಕೋಟ್, ಮಾ.13: ನಾಯಕ ಜಯದೇವ್ ಉನದ್ಕಟ್ ಅಮೋಘ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಬಂಗಾಳದ ವಿರುದ್ಧ ಸೌರಾಷ್ಟ್ರ ತಂಡ ಚೊಚ್ಚಲ ರಣಜಿ ಟ್ರೋಫಿ ಎತ್ತಿ ಹಿಡಿಯಲು ಪ್ರಮುಖ ಪಾತ್ರವಹಿಸಿದರು. ಫೈನಲ್ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು. ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದ ಆಧಾರದಲ್ಲಿ ಸೌರಾಷ್ಟ್ರ ರಣಜಿ ಟ್ರೋಫಿಯ ಮೇಲೆ ತನ್ನ ಹಕ್ಕು ಚಲಾಯಿಸಿತು.

ಗುರುವಾರ ನಾಲ್ಕನೇ ದಿನದಾಟದಂತ್ಯಕ್ಕೆ ಏಳನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 91 ರನ್ ಸೇರಿಸಿದ ಅನುಸ್ತುಪ್ ಮಜುಂದಾರ್(63) ಹಾಗೂ ಅರ್ನಾಬ್ ನಂದಿ(ಔಟಾಗದೆ 40)ಬಂಗಾಳಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಒದಗಿಸುವ ವಿಶ್ವಾಸದೊಂದಿಗೆ ಶುಕ್ರವಾರ ಐದನೇ ದಿನದ ಬ್ಯಾಟಿಂಗ್ ಮುಂದುವರಿಸಿದರು. ಗುಜರಾತ್ ವಿರುದ್ಧ ಸೆಮಿ ಫೈನಲ್‌ನಲ್ಲಿ ಏಳು ವಿಕೆಟ್‌ಗಳನ್ನು ಗೊಂಚಲು ಪಡೆದು ಏಕಾಂಗಿಯಾಗಿ ಸೌರಾಷ್ಟ್ರ ತಂಡವನ್ನು ಫೈನಲ್ ತಲುಪಿಸಿದ್ದ ಜಯದೇವ್ ಉನದ್ಕಟ್ ಶುಕ್ರವಾರ ಮೂರು ಎಸೆತಗಳಲ್ಲಿ ಫಾರ್ಮ್‌ನಲ್ಲಿರುವ ಮಜುಂದಾರ್‌ರನ್ನು ಎಲ್ಬಿಡಬ್ಲು ಬಲೆಗೆ ಬೀಳಿಸಿದರೆ, ಆಕಾಶದೀಪ್‌ರನ್ನು ರನೌಟ್ ಮಾಡಿ ಸೌರಾಷ್ಟ್ರಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಮೇಲುಗೈ ಒದಗಿಸಿಕೊಟ್ಟರು. ಮಾತ್ರವಲ್ಲ ಪ್ರಶಸ್ತಿಯನ್ನು ದೃಢಪಡಿಸಿದರು.

ಬೆಳಗ್ಗಿನ ಅವಧಿಯಲ್ಲಿ ಒಂದು ಗಂಟೆ, 27 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ನಿನ್ನೆಯ ಮೊತಕ್ಕೆ 27 ರನ್ ಸೇರಿಸಿದ ಬಂಗಾಳ ಕೊನೆಯ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ 381 ರನ್‌ಗೆ ಆಲೌಟಾಯಿತು. ಬಂಗಾಳವನ್ನು ಬೇಗನೆ ಆಲೌಟ್ ಮಾಡಿದ ಉನದ್ಕಟ್ ಸೌರಾಷ್ಟ್ರಕ್ಕೆ ಮೊದಲ ಇನಿಂಗ್ಸ್‌ನಲ್ಲಿ 44 ರನ್ ಮುನ್ನಡೆ ಒದಗಿಸಿಕೊಟ್ಟರು. ಬಂಗಾಳಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆಯಲು ನಾಲ್ಕು ವಿಕೆಟ್ ಸಹಾಯದಿಂದ 72 ರನ್ ಗಳಿಸಬೇಕಾಗಿತ್ತು.

ಸೌರಾಷ್ಟ್ರ ಎರಡನೇ ಇನಿಂಗ್ಸ್‌ನಲ್ಲಿ 34 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದ್ದಾಗ ಉಭಯ ತಂಡದ ನಾಯಕರು ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸಲು ನಿರ್ಧರಿಸಿದರು.ಈ ಗೆಲುವಿನೊಂದಿಗೆ ಸೌರಾಷ್ಟ್ರ ರಣಜಿ ಟ್ರೋಫಿ ಬರವನ್ನು ನೀಗಿಸಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News