ಕೋವಿಡ್-19 ಭೀತಿ: ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿ ರದ್ದು
Update: 2020-03-13 18:33 IST
ಹೊಸದಿಲ್ಲಿ, ಮಾ.13: ಕೋವಿಡ್-19 ಭೀತಿಯ ಹಿನ್ನೆಲೆಯಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾದ ನಡುವೆ ಲಕ್ನೋ ಹಾಗೂ ಕೋಲ್ಕತಾದಲ್ಲಿ ನಿಗದಿಯಾಗಿರುವ ಏಕದಿನ ಸರಣಿಯ ಇನ್ನೆರಡು ಪಂದ್ಯಗಳನ್ನು ಶುಕ್ರವಾರ ರದ್ದುಗೊಳಿಸಲಾಗಿದೆ.
‘‘ಐಪಿಎಲ್‌ನ್ನು ಮುಂದೂಡಲಾಗಿದೆ. ಈ ಹಂತದಲ್ಲಿ ಸರಣಿಯನ್ನು ರದ್ದುಪಡಿಸುವುದು ಸೂಕ್ತ ಎಂದು ನಿರ್ಧರಿಸಲಾಗಿದೆ. ನಮ್ಮ ದೇಶ ಗಂಭೀರ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೆ’’ ಎಂದು ಬಿಸಿಸಿಐ ಉನ್ನತಾಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ಉಭಯ ತಂಡಗಳ ಮಧ್ಯೆ ಧರ್ಮಶಾಲಾದಲ್ಲಿ ಗುರುವಾರ ನಡೆಯಬೇಕಾಗಿದ್ದ ಮೊದಲ ಏಕದಿನ ಪಂದ್ಯ ಒಂದು ಎಸೆತ ಕಾಣದೇ ಮಳೆಗಾಹುತಿಯಾಗಿತ್ತು. ಉಭಯ ತಂಡಗಳು 2ನೇ ಪಂದ್ಯವನ್ನಾಡಲು ಶುಕ್ರವಾರ ಲಕ್ನೊಗೆ ತಲುಪಿದ್ದವು. ‘‘ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಹೊಸದಿಲ್ಲಿಗೆ ಆಗಮಿಸಲಿದ್ದು, ಬೇಗನೆ ಲಭ್ಯವಿರುವ ವಿಮಾನದಲ್ಲಿ ಸ್ವದೇಶಕ್ಕೆ ವಾಪಸಾಗಲಿದೆ’’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದರು.