×
Ad

ಕೊರೋನ ಭೀತಿ: ಸಿಡ್ನಿಯ ಖಾಲಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯ!

Update: 2020-03-13 20:14 IST

ಸಿಡ್ನಿ, ಮಾ.13: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ 48,000 ಖಾಲಿ ಸೀಟುಗಳ ಎದುರು ನಡೆದ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ನ್ಯೂಝಿಲ್ಯಾಂಡ್ ತಂಡವನ್ನು 71 ರನ್‌ಗಳ ಅಂತರದಿಂದ ಮಣಿಸಿತು. ಕೊರೋನ ವೈರಸ್ ಕಾಂಗರೂ ನಾಡಿನಲ್ಲಿ ಹರಡುವುದನ್ನು ತಡೆಯುವ ಸಲುವಾಗಿ ಪ್ರೇಕ್ಷಕರಿಲ್ಲದೆ ಪಂದ್ಯವನ್ನು ಆಡಲಾಯಿತು.

ಮೂರು ಪಂದ್ಯಗಳ ಸರಣಿಯಲ್ಲಿ ಯಾವೊಬ್ಬ ಅಭಿಮಾನಿಗಳಿಗೂ ವೀಕ್ಷಣೆಗೆ ಅವಕಾಶವಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯ(ಸಿಎ)ಶುಕ್ರವಾರ ತಿಳಿಸಿತ್ತು. ಹೀಗಾಗಿ ಮುಂದಿನ ಶುಕ್ರವಾರ ಹೊಬರ್ಟ್‌ನಲ್ಲಿ ನಡೆಯುವ ಪಂದ್ಯವೂ ಖಾಲಿ ಸ್ಟೇಡಿಯಂ ಎದುರು ನಡೆಯಲಿದೆ.

ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 258 ರನ್ ಗಳಿಸಿತು. ಕಠಿಣ ಗುರಿ ಬೆನ್ನಟ್ಟಿದ ನ್ಯೂಝಿಲ್ಯಾಂಡ್ ತಂಡವನ್ನು 41 ಓವರ್‌ಗಳಲ್ಲಿ 187 ರನ್‌ಗೆ ನಿಯಂತ್ರಿಸಿದ ಆಸ್ಟ್ರೇಲಿಯ ಐದು ಪಂದ್ಯಗಳ ಸೋಲಿನ ಸುಳಿಯಿಂದ ಹೊರಬಂತು.

ಆತಿಥೇಯ ತಂಡದ ಪರ ನಾಯಕ ಆ್ಯರೊನ್ ಫಿಂಚ್(60) ಹಾಗೂ ಡೇವಿಡ್ ವಾರ್ನರ್(67)ಮೊದಲ ವಿಕೆಟ್ ಜೊತೆಯಾಟದಲ್ಲಿ 124 ರನ್ ಗಳಿಸಿದ ಉತ್ತಮ ಆರಂಭ ಒದಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮಾರ್ನಸ್ ಲ್ಯಾಬುಶೆನ್(56,52 ಎಸೆತ)ಅರ್ಧಶತಕ ಸಿಡಿಸಿದರು.

ನ್ಯೂಝಿಲ್ಯಾಂಡ್‌ನ ಪರ ಅಗ್ರ ಸರದಿಯಲ್ಲಿ ಮಾರ್ಟಿನ್ ಗಪ್ಟಿಲ್ 40 ರನ್ ಸಿಡಿಸಿದರು. ಇದು ಕಿವೀಸ್ ಪರ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ. ಕಾಲಿನ್ ಗ್ರಾಂಡ್‌ಹೋಮ್ ಹಾಗೂ ಟಾಮ್ ಲಥಾಮ್ ಆರನೇ ವಿಕೆಟ್‌ಗೆ 51 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಲಥಾಮ್(38)ವಿಕೆಟನ್ನು ಉರುಳಿಸಿದ ಜೋಶ್ ಹೇಝಲ್‌ವುಡ್ ಈ ಜೋಡಿಯನ್ನು ಬೇರ್ಪಡಿಸಿದರು. ಗ್ರಾಂಡ್‌ಹೋಮ್ 25 ರನ್ ಗಳಿಸಿ ಆಫ್ ಸ್ಪಿನ್ನರ್ ಆ್ಯಡಮ್ ಝಾಂಪಗೆ ವಿಕೆಟ್ ಒಪ್ಪಿಸಿದರು. ಆಗ ನ್ಯೂಝಿಲ್ಯಾಂಡ್ ಸ್ಕೋರ್ 7ಕ್ಕೆ160.

ಆಸ್ಟ್ರೇಲಿಯದ ಪರ ಕಮಿನ್ಸ್(3-25) ಹಾಗೂ ಮಾರ್ಷ್(3-29)ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಹೇಝಲ್‌ವುಡ್(2-37) ಹಾಗೂ ಝಾಂಪ (2-50)ತಲಾ ಎರಡು ವಿಕೆಟ್‌ಗಳನ್ನು ಉರುಳಿಸಿದರು.

ಚೆಂಡು ಸಿಕ್ಸರ್‌ಗೆ ಚಿಮ್ಮಿದಾಗ ಸಂಭ್ರಮಿಸಲು ಸ್ಟೇಡಿಯಂನಲ್ಲಿ ಕ್ರಿಕೆಟ್ ಅಭಿಮಾನಿಗಳೇ ಇರಲಿಲ್ಲ. ಹೊಸ ಶಿಷ್ಟಾಚಾರದ ಪ್ರಕಾರ ಪಂದ್ಯದ ಕೊನೆಯಲ್ಲಿ ಉಭಯ ತಂಡದ ಆಟಗಾರರು ಪರಸ್ಪರ ಕೈಕುಲುಕುವ ಸಂಪ್ರದಾಯವನ್ನು ಕೈಬಿಡಲಾಗಿದೆ.

 ಕೊರೋನ ವೈರಸ್ ಭೀತಿಯ ಕಾರಣಕ್ಕೆ ಶುಕ್ರವಾರ ಮೆಲ್ಬೋರ್ನ್‌ನಲಿ ನಡೆಯಬೇಕಾಗಿದ್ದ ಫಾರ್ಮುಲಾ ಒನ್ ಗ್ರಾನ್‌ಪ್ರಿ ಟೂರ್ನಿಯು ರದ್ದಾಗಿತ್ತು. 500ಕ್ಕಿಂತ ಹೆಚ್ಚು ಜನರು ಒಟ್ಟಿಗೆ ಸೇರಬೇಡಿ ಎಂದು ಪ್ರಧಾನಮಂತ್ರಿ ಸ್ಕಾಟ್ ಮೊರಿಸನ್ ದೇಶದ ಜನತೆಗೆ ಕರೆ ನೀಡಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯ: 50 ಓವರ್‌ಗಳಲ್ಲಿ 258/7

(ವಾರ್ನರ್ 67, ಫಿಂಚ್ 60, ಲ್ಯಾಬುಶೆನ್ 56, ಇಶ್ ಸೋಧಿ 3-51, ಸ್ಯಾಂಟ್ನರ್ 2-34, ಫರ್ಗ್ಯುಸನ್ 2-60)

ನ್ಯೂಝಿಲ್ಯಾಂಡ್: 41 ಓವರ್‌ಗಳಲ್ಲಿ 187 ರನ್‌ಗೆ ಆಲೌಟ್

(ಗಪ್ಟಿಲ್ 40, ಕಮಿನ್ಸ್ 3-25, ಮಾರ್ಷ್ 3-29, ಹೇಝಲ್‌ವುಡ್ 2-37,ಝಾಂಪ 2-50)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News