ನಾಡಾ ಪರೀಕ್ಷೆಯಲ್ಲಿ ನಾಲ್ವರು ಬಾಲಕರು ಅನುತ್ತೀರ್ಣ
ಹೊಸದಿಲ್ಲಿ, ಮಾ.17: ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ(ನಾಡಾ) ನಡೆಸಿರುವ ಪರೀಕ್ಷೆಯಲ್ಲಿ ನಿಷೇಧಿತ ದ್ರವ್ಯ ಸೇವನೆಯಲ್ಲಿ ಸಿಕ್ಕಿಬಿದ್ದಿರುವ ಇಬ್ಬರು ಟ್ರಾಕ್ ಆ್ಯಂಡ್ ಫೀಲ್ಡ್ ಅಥ್ಲೀಟ್‌ಗಳು ಸಹಿತ ನಾಲ್ವರು ಬಾಲಕರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.
ಕಳೆದ ವರ್ಷ ಆಂಧ್ರಪ್ರದೇಶದ ತಿರುಪತಿಯಲ್ಲಿ 17ನೇ ಆವೃತ್ತಿಯ ರಾಷ್ಟ್ರೀಯ ಅಂತರ್ ಜಿಲ್ಲಾ ಜೂನಿಯರ್ ಅಥ್ಲೆಟಿಕ್ಸ್ ಕೂಟದ ವೇಳೆ ನಡೆಸಿದ ಪರೀಕ್ಷೆಯಲ್ಲಿ ಇಬ್ಬರು ಬಾಲಕರು ಟ್ರಾಕ್ ಹಾಗೂ ಫೀಲ್ಡ್ ಅಥ್ಲೀಟ್‌ಗಳು ಅನುತ್ತೀರ್ಣರಾಗಿದ್ದರು. ಜನವರಿ 21ರಿಂದ ಇಬ್ಬರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ನಾಡಾ ಮಂಗಳವಾರ ತಿಳಿಸಿದೆ. ಇತರ ಇಬ್ಬರು ಬಾಲಕರು ಬಾಕ್ಸರ್ ಹಾಗೂ ವಾಲಿಬಾಲ್ ಆಟಗಾರರಾಗಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ನಡೆದಿದ್ದ 65ನೇ ಆವೃತ್ತಿಯ ರಾಷ್ಟ್ರೀಯ ಸ್ಕೂಲ್ ಗೇಮ್ಸ್ ನಲ್ಲಿ (ಬಾಕ್ಸಿಂಗ್‌ಅಂಡರ್-14) ನಡೆಸಲಾಗಿರುವ ಪರೀಕ್ಷೆಯಲ್ಲಿ ಬಾಕ್ಸರ್ ಸಿಕ್ಕಿಬಿದ್ದಿದ್ದರು. ಬಾಕ್ಸರ್‌ನನ್ನು ಫೆ.6ರತನಕ ಅಮಾನತುಗೊಳಿಸಲಾಗಿದೆ. ಕಳೆದ ವರ್ಷ ನಡೆದ ಶಾಲಾ ಗೇಮ್ಸ್‌ನಲ್ಲಿ ನಡೆಸಲಾಗಿರುವ ಪರೀಕ್ಷೆಯಲ್ಲಿ ವಾಲಿಬಾಲ್ ಆಟಗಾರ ಅನುತ್ತೀರ್ಣರಾಗಿದ್ದು, ಜನವರಿ 31ರಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.