ಟರ್ಕಿಯಿಂದ ಸ್ವದೇಶಕ್ಕೆ ವಾಪಸಾಗುವಂತೆ ನೀರಜ್ ಚೋಪ್ರಾಗೆ ಸೂಚನೆ

Update: 2020-03-17 17:15 GMT

ಹೊಸದಿಲ್ಲಿ, ಮಾ.17: ಜಾವೆಲಿನ್ ಎಸೆತಗಾರರಾದ ನೀರಜ್ ಚೋಪ್ರಾ ಹಾಗೂ ಶಿವಪಾಲ್ ಸಿಂಗ್ ಅವರು ಕ್ರಮವಾಗಿ ಟರ್ಕಿ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ನಡೆಸುತ್ತಿದ್ದ ತರಬೇತಿ ಶಿಬಿರವನ್ನು ರದ್ದುಪಡಿಸಲಾಗಿದ್ದು, ಈ ಇಬ್ಬರೂ ಅಥ್ಲೀಟ್‌ಗಳು ಭಾರತಕ್ಕೆ ವಾಪಸಾಗುತ್ತಿದ್ದಾರೆ. ‘‘ಕೊರೋನ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಬ್ಬರೂ ಜಾವೆಲಿನ್ ಎಸೆತಗಾರರನ್ನು ಭಾರತಕ್ಕೆ ಕರೆಸಿಕೊಳ್ಳಲು ಫೆಡರೇಶನ್ ನಿರ್ಧರಿಸಿದೆ. ಚೋಪ್ರಾ ಹಾಗೂ ಅವರ ತಂಡ ಟರ್ಕಿಯಿಂದ ಬುಧವಾರ ಬೆಳಗ್ಗೆ ಆಗಮಿಸಲಿದ್ದು, ದಕ್ಷಿಣ ಆಫ್ರಿಕಾದಿಂದ ಸಿಂಗ್ ಹಾಗೂ ಅವರ ಬಳಗ ಶನಿವಾರ ಬೆಳಗ್ಗೆ ಭಾರತಕ್ಕೆ ಆಗಮಿಸಲಿದೆ’’ ಎಂದು ಭಾರತದ ಅಥ್ಲೆಟಿಕ್ಸ್ ಫೆಡರೇಶನ್(ಎಎಫ್‌ಐ)ಅಧ್ಯಕ್ಷ ಅದಿಲ್ಲೆ ಸುಮರಿವಾಲಾ ತಿಳಿಸಿದ್ದಾರೆ.

ಯುಎಇ, ಖತರ್, ಒಮಾನ್ ಹಾಗೂ ಕುವೈತ್‌ನಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಕನಿಷ್ಠ 14 ದಿನಗಳ ಕಾಲ ಗೃಹಬಂಧನದಲ್ಲಿರಬೇಕು ಎಂದು ಕೇಂದ್ರ ಸರಕಾರ ಸೋಮವಾರ ನೀಡಿರುವ ಸೂಚನೆಯೊಂದರಲ್ಲಿ ತಿಳಿಸಿದೆ.

ನೀರಜ್ ಹಾಗೂ ರೋಹಿತ್ ಯಾದವ್ ಅವರು ಟರ್ಕಿಯಲ್ಲಿ ಜರ್ಮನಿಯ ಬಯೊಮೆಕಾನಿಕ್ಸ್ ಎಕ್ಸ್‌ಪರ್ಟ್ ಕ್ಲಾವುಸ್ ಬಾರ್ಟೊಂನೆಝ್ ಹಾಗೂ ಫಿಸಿಯೊ ಇಶಾನ್ ಮರ್ವಾಹಾರಿಂದ ತರಬೇತಿ ಪಡೆಯುತ್ತಿದ್ದಾರೆ. ದಕ್ಷಿಣ ಆಫ್ರಿಕಾದಿಂದ ಶಿವಪಾಲ್ ಜೊತೆಗೆ ಥ್ರೋವರ್‌ಗಳಾದ ಅನ್ನು ರಾಣಿ, ವಿಪಿನ್ ಕಸನಾ ಹಾಗೂ ಅರ್ಷದೀಪ್ ಸಿಂಗ್ ಅವರು ಯುವೀ ಹಾನ್ ಅವರೊಂದಿಗೆ ವಾಪಸಾಗಲಿದ್ದಾರೆ.

ನೀರಜ್ ಹಾಗೂ ಶಿವಪಾಲ್ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News