ವೇಳಾಪಟ್ಟಿಯ ಪ್ರಕಾರವೇ ಪುರುಷರ ಟ್ವೆಂಟಿ-20 ವಿಶ್ವಕಪ್: ಕ್ರಿಕೆಟ್ ಆಸ್ಟ್ರೇಲಿಯ ಯೋಜನೆ

Update: 2020-03-17 17:32 GMT

ಸಿಡ್ನಿ, ಮಾ.17: ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ವಿಶ್ವದಾದ್ಯಂತ ಕ್ರೀಡಾ ಸ್ಪರ್ಧೆಗಳ ಮೇಲೆ ತೀವ್ರ ಪರಿಣಾಮಬೀರುತ್ತಿರುವ ಹೊರತಾಗಿಯೂ ಅಕ್ಟೋಬರ್‌ನಲ್ಲಿ ವೇಳಾಪಟ್ಟಿಯ ಪ್ರಕಾರವೇ ಪುರುಷರ ಟ್ವೆಂಟಿ-20 ವಿಶ್ವಕಪ್ ಟೂರ್ನಮೆಂಟ್‌ನ್ನು ಆಯೋಜಿಸಲು ಕ್ರಿಕೆಟ್ ಆಸ್ಟ್ರೇಲಿಯ ಯೋಜನೆ ರೂಪಿಸಿದೆ. ‘‘ಇನ್ನು ಕೆಲವೇ ವಾರಗಳು ಅಥವಾ ಕೆಲವೇ ತಿಂಗಳುಗಳ ಬಳಿಕ ಎಲ್ಲ ಮಾದರಿಯ ಕ್ರೀಡೆಗಳು ಮತ್ತೊಮ್ಮೆ ಆರಂಭವಾಗಲಿವೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ. ಈ ಪರಿಸ್ಥಿತಿಯ ಬಗ್ಗೆ ಮಾತನಾಡಲು ನಾವ್ಯಾರೂ ತಜ್ಞರಲ್ಲ. ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಪುರುಷರ ಟ್ವೆಂಟಿ-20 ವಿಶ್ವಕಪ್‌ನ್ನು ಆಯೋಜಿಸುವ ವಿಶ್ವಾಸ ನಮಗಿದೆ’’ಎಂದು ಕ್ರಿಕೆಟ್ ಆಸ್ಟ್ರೇಲಿಯ ಮುಖ್ಯಸ್ಥ ಕೆವಿನ್ ರಾಬರ್ಟ್ಸ್ ತಿಳಿಸಿದ್ದಾರೆ. ಪುರುಷರ ಟ್ವೆಂಟಿ-20 ವಿಶ್ವಕಪ್ ಅಕ್ಟೋಬರ್ 18ರಿಂದ 23ರ ತನಕ ನಡೆಯಲಿರುವ ಅರ್ಹತಾ ಸುತ್ತಿನ ಪಂದ್ಯದ ಮುಖಾಂತರ ಆರಂಭವಾಗಲಿದೆ. ಅಕ್ಟೋಬರ್ 24ರಿಂದ ಪ್ರಮುಖ 12 ತಂಡಗಳು ಭಾಗವಹಿಸುವ ವಿಶ್ವಕಪ್ ಟೂರ್ನಿಯು ಆರಂಭವಾಗಲಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನವೆಂಬರ್ 15ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುವಂತೆ ಮಾಡಲು ಸಿಎ ಯೋಜನೆ ಹಾಕಿಕೊಂಡಿದೆ. ‘‘ಈ ಹಂತದಲ್ಲಿ ನ.15ರಂದು ಎಂಸಿಜಿಯಲ್ಲಿ ನಡೆಯುವ ಫೈನಲ್ ಪಂದ್ಯವನ್ನು ಹೌಸ್‌ಫುಲ್ ಆಗಿಸುವುದು ನಮ್ಮ ಪ್ರಮುಖ ಯೋಜನೆ. ಪುರುಷರ ವಿಶ್ವಕಪ್‌ನ ಮೂಲಕ ವಿಶ್ವಕ್ಕೆ ಸ್ಫೂರ್ತಿಯಾಗುವ ಯೋಚನೆ ನಮ್ಮದಾಗಿದೆ’’ ಎಂದು ರಾಬಟ್ಸ್‌ರ್  ಹೇಳಿದ್ದಾರೆ. ವಿಶ್ವದಾದ್ಯಂತ 7,000ಕ್ಕೂ ಅಧಿಕ ಜನರನ್ನು ಬಲಿ ಪಡೆದಿರುವ 1,75,000 ಜನರಿಗೆ ಸೋಂಕುಪೀಡಿತರನ್ನಾಗಿ ಮಾಡಿರುವ ಕೊರೋನ ವೈರಸ್ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಒಲಿಂಪಿಕ್ಸ್, ಯುರೋ 2020 ಹಾಗೂ ಕೊಪಾ ಅಮೆರಿಕ ಟೂರ್ನಿಯ ಮೇಲೆ ಕರಿಛಾಯೆ ಕಂಡುಬಂದಿದೆ.

ಕಳೆದ ವಾರ ನ್ಯೂಝಿಲ್ಯಾಂಡ್ ವಿರುದ್ಧ ಮೊದಲ ಪಂದ್ಯವನ್ನು ಪ್ರೇಕ್ಷಕರಿಲ್ಲದೆ ಆಡಿದ್ದ ಆಸ್ಟ್ರೇಲಿಯ ಕ್ರಿಕೆಟ್ ತಂಡ ಬಳಿಕ ಉಳಿದೆರಡು ಪಂದ್ಯಗಳನ್ನು ರದ್ದುಪಡಿಸಿತ್ತು. ಭಾರತ-ದಕ್ಷಿಣ ಆಫ್ರಿಕಾದ ಏದಿನ ಸರಣಿಯೂ ರದ್ದುಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News