ಎಫ್‌ಐಎಚ್ ಪ್ರೊ ಲೀಗ್ ಮೇ 17 ರ ತನಕ ಮುಂದೂಡಿಕೆ

Update: 2020-03-19 16:53 GMT

ಲಾಸಾನ್, ಮಾ.19: ವಿಶ್ವದಾದ್ಯಂತ 9,000ಕ್ಕೂ ಅಧಿಕ ಜನರ ಬಲಿ ಪಡೆದಿರುವ ಕೋವಿಡ್-19 ವೈರಸ್ ಭೀತಿಯ ಕಾರಣಕ್ಕೆ ಭಾರತದ ಪಂದ್ಯವೂ ಸೇರಿದಂತೆ ಪ್ರೊ ಲೀಗ್‌ನ ಎಲ್ಲ ಪಂದ್ಯಗಳನ್ನು ಮೇ 17ರ ತನಕ ಮುಂದೂಡಲು ಅಂತರ್‌ರಾಷ್ಟ್ರೀಯ ಹಾಕಿ ಫೆಡರೇಶನ್(ಎಚ್‌ಐಎಫ್)ಗುರುವಾರ ನಿರ್ಧರಿಸಿದೆ.

ಎಪ್ರಿಲ್ 15ಕ್ಕಿಂತ ಮೊದಲು ನಿಗದಿಯಾಗಿರುವ ಎಲ್ಲ ಪ್ರೊ ಲೀಗ್ ಪಂದ್ಯಗಳನ್ನು ಕಳೆದ ಶನಿವಾರ ಎಫ್‌ಐಎಚ್ ಮುಂದೂಡಿತ್ತು.

ಕೋವಿಡ್-19 ವೈರಸ್ ಬಗ್ಗೆ ಹೊಸ ಬೆಳವಣಿಗೆಯನ್ನು ಆಧರಿಸಿ, ಜಾಗತಿಕವಾಗಿ ಸಂಬಂಧಿಸಿದ ಸರಕಾರಿ ಅಧಿಕಾರಿಗಳಿಗೆ ಪ್ರತಿಕ್ರಿಯೆಯಾಗಿ ಎಫ್‌ಐಎಚ್ ಎಲ್ಲ ರಾಷ್ಟ್ರೀಯ ಅಸೋಸಿಯೇಶನ್‌ಗಳಿಗೆ ಬೆಂಬಲ ನೀಡಲಿದೆ. ಮೇ 17ರ ತನಕ ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನ್ನು ಮುಂದೂಡಲು ಇಂದು ನಿರ್ಧರಿಸಲಾಗಿದೆ ಎಂದು ವಿಶ್ವ ಕ್ರೀಡಾ ಮಂಡಳಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.

 ಮೇ 17ರ ತನಕ ನಿಗದಿಯಾಗಿರುವ ಎಲ್ಲ ಪಂದ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ವಿಶ್ವ ಆರೋಗ್ಯ ಸಂಘಟನೆ ಹಾಗೂ ಸಾರ್ವಜನಿಕ ಅಧಿಕಾರಿಗಳ ನಿರ್ಧಾರವನ್ನು ಆಧರಿಸಿ ಪರಿಸ್ಥಿತಿಯ ಮೇಲೆ ಎಫ್‌ಐಎಚ್ ತೀವ್ರ ನಿಗಾ ಇಡಲಿದೆ. ಭಾರತೀಯ ಪುರುಷರ ಹಾಕಿ ತಂಡ ಎಪ್ರಿಲ್ 25,26ರಂದು ಜರ್ಮನಿಯ ವಿರುದ್ಧ ಹಾಗೂ ಮೇ 2 ,3ರಂದು ಗ್ರೇಟ್ ಬ್ರಿಟನ್ ವಿರುದ್ಧ ಆಡಬೇಕಾಗಿತ್ತು. ಮೇ 23, 24ರಂದು ಆತಿಥೇಯ ನ್ಯೂಝಿಲ್ಯಾಂಡ್ ವಿರುದ್ಧ ಆಡಬೇಕಾಗಿದ್ದ ಭಾರತ ಜೂನ್ 5-6ರಂದು ಅರ್ಜೆಂಟೀನ ವಿರುದ್ಧ ಪಂದ್ಯಗಳನ್ನು ಆಡಬೇಕಾಗಿದೆ.

ಭಾರತ ಜೂನ್ 13 ಹಾಗೂ 14ರಂದು ವಲೆನ್ಸಿಯಾದಲ್ಲಿ ಸ್ಪೇನ್ ವಿರುದ್ಧ ಕೊನೆಯ ಎಫ್‌ಐಎಚ್ ಪ್ರೊ ಲೀಗ್ ಪಂದ್ಯವನ್ನು ಆಡಲಿದೆ. ಮುಂಬರುವ ಪಂದ್ಯಗಳಲ್ಲಿ ಆಡಲು ಯುರೋಪ್‌ಗೆ ತೆರಳದಿರಲು ನ್ಯೂಝಿಲ್ಯಾಂಡ್ ಹಾಗೂ ಆಸ್ಟ್ರೇಲಿಯ ಈಗಾಗಲೇ ನಿರ್ಧರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News