ಒಲಿಂಪಿಕ್ಸ್ ಕ್ರೀಡಾ ಜ್ಯೋತಿ ಹಸ್ತಾಂತರ

Update: 2020-03-19 17:15 GMT

ಅಥೆನ್ಸ್, ಮಾ.19: ಮಾರಣಾಂತಿಕ ಕೊರೋನ ವೈರಸ್ ಮಲ್ಟಿ-ಮಿಲಿಯನ್ ಡಾಲರ್ ಮೊತ್ತದ ಒಲಿಂಪಿಕ್ಸ್ ಸ್ಪರ್ಧೆ ನಡೆಯುವ ಕುರಿತಂತೆ ಅನುಮಾನ ಹುಟ್ಟುಹಾಕಿದ್ದರೂ ಟೋಕಿಯೊ ಗೇಮ್ಸ್ 2020ರ ಸಂಘಟಕರು ಗ್ರೀಕ್ ರಾಜಧಾನಿಯಲ್ಲಿ ಗುರುವಾರ ಸರಳವಾಗಿ ನಡೆದ ಹಸ್ತಾಂತರ ಕಾರ್ಯಕ್ರಮದಲ್ಲಿ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿದರು.

1896ರಲ್ಲಿ ಮೊದಲ ಆಧುನಿಕ ಗೇಮ್ಸ್ ನಡೆದ ತಾಣ ಅಥೆನ್ಸ್‌ನ ಪ್ಯಾನಾಥೇನೈಕ್ ಸ್ಟೇಡಿಯಂನಲ್ಲಿ ಪ್ರೇಕ್ಷಕರಿಗೆ ನಿರ್ಬಂಧ ಹೇರಲಾಗಿದ್ದ ಸಮಾರಂಭದಲ್ಲಿ ಒಲಿಂಪಿಕ್ಸ್ ಕ್ರೀಡಾಜ್ಯೋತಿಯನ್ನು ಟೋಕಿಯೊ ಒಲಿಂಪಿಕ್ಸ್ ಪ್ರತಿನಿಧಿ, ಜಪಾನ್‌ನ ಮಾಜಿ ಈಜುತಾರೆ ನವೊಕೊ ಇಮೊಟೊ ಸ್ವೀಕರಿಸಿದರು.

ಕ್ರೀಡಾ ಜ್ಯೋತಿಯು ಶುಕ್ರವಾರ ಜಪಾನ್‌ಗೆ ತಲುಪಲಿದ್ದು, ದೇಶೀಯ ರಿಲೇ ಮಾರ್ಚ್ 26ರಿಂದ ಆರಂಭವಾಗಲಿದೆ. ಒಲಿಂಪಿಕ್ ಗೇಮ್ಸ್ ಜುಲೈ 24ರಿಂದ ಆಗಸ್ಟ್ 9ರ ತನಕ ನಡೆಯಲಿದೆ.

ವಿಶ್ವವ್ಯಾಪಿ ದಟ್ಟವಾಗಿ ವ್ಯಾಪಿಸಿರುವ ಕೊರೋನ ವೈರಸ್ ಸೋಂಕು 2 ಲಕ್ಷಕ್ಕೂ ಅಧಿಕ ಜನರಿಗೆ ತಗಲಿದ್ದು, 8,700ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಈ ಮಾರಣಾಂತಿಕ ವೈರಸ್ ಹಲವು ಕ್ರೀಡಾ ಸ್ಪರ್ಧೆಗಳು ರದ್ದುಗೊಳ್ಳಲು ಕಾರಣವಾಗಿದ್ದು, ಒಲಿಂಪಿಕ್ಸ್ ಯೋಜನೆಯಂತೆ ನಡೆಯಲಿದೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ಹಾಗೂ ಜಪಾನ್ ಸರಕಾರ ಒಲಿಂಪಿಕ್ ಗೇಮ್ಸ್ ನಿಗದಿಯಂತೆಯೇ ನಡೆಯಲಿದೆ ಎಂದು ಹೇಳಿವೆ.

 50,000 ಪ್ರೇಕ್ಷಕರ ಸಾಮರ್ಥ್ಯದ ಸ್ಟೇಡಿಯಂನಲ್ಲಿ ಖಾಲಿ ಆಸನಗಳ ಸಮ್ಮುಖದಲ್ಲಿ ಗ್ರೀಸ್ ಒಲಿಂಪಿಕ್ಸ್ ಸಮಿತಿಯ ಮುಖ್ಯಸ್ಥ ಸ್ಪೈರೊಸ್ ಕಾಪ್ರೊಲಾಸ್ ಜಪಾನ್‌ನ ಮಾಜಿ ಒಲಿಂಪಿಕ್ಸ್ ಈಜುಪಟು ಇಮೊಟೊರಿಗೆ ಕ್ರೀಡಾಜ್ಯೋತಿಯನ್ನು ಹಸ್ತಾಂತರಿಸಿದರು.

ವೈರಸ್ ಹರಡುವುದನ್ನು ತಡೆಯಲು ಗ್ರೀಕ್‌ನಲ್ಲಿ ಕಠಿಣ ನಿರ್ಬಂಧ ಹೇರಿರುವ ಕಾರಣ ಸೆಂಟ್ರಲ್ ಅಥೆನ್ಸ್ ಸ್ಟೇಡಿಯಂನಲ್ಲಿ ಕೆಲವೇ ಅಧಿಕಾರಿಗಳಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಕ್ರೀಡಾ ಜ್ಯೋತಿಯ ಆಗಮನ ವಿಶ್ವದೆಲ್ಲೆಡೆ ವ್ಯಾಪಿಸಿರುವ ಕಪ್ಪುಮೋಡವನ್ನು ಚದುರಿಸಲು ನೆರವಾಗುವ ವಿಶ್ವಾಸ ಮೂಡಿಸಿದೆ ಎಂದು ಟೋಕಿಯೊ ಗೇಮ್ಸ್ ಮುಖ್ಯಸ್ಥ ಯೊಶಿರೊ ಮೋರಿ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

2011ರ ಭೂಕಂಪ ಹಾಗೂ ಸುನಾಮಿಯ ತಾಣವಾಗಿರುವ ಫುಕುಶಿಮಾದಲ್ಲಿ ದೇಶೀಯ ರಿಲೇ ಆರಂಭಕ್ಕೆ ಮೊದಲು ಶುಕ್ರವಾರ ಮಿಯಾಗಿಯ ಜೆಎಎಸ್‌ಡಿಎಫ್ ಮಾಟ್ಸುಶಿಮಾ ವಾಯುನೆಲೆಯಲ್ಲಿ ಕ್ರೀಡಾ ಜ್ಯೋತಿ ಹೊತ್ತ ವಿಮಾನ ಇಳಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News